ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!

ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ಕುರಿತ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಘರ್ಷ ದೆಹಲಿ ತಲುಪಿದೆ. ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲು ಸಜ್ಜಾಗಿದ್ದು, ಎರಡೂ ಬಣಗಳು ತಮ್ಮ ರಾಜಕೀಯ ಬಲ ಪ್ರದರ್ಶಿಸುತ್ತಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.28): ಕರ್ನಾಟಕ ರಾಜಕಾರಣದಲ್ಲಿ ಬಹುದಿನಗಳಿಂದ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ 'ಮಹಾ ಮುಹೂರ್ತ' ಕೊನೆಗೂ ಹತ್ತಿರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ 'ಸಿಂಹಾಸನ ಸಂಘರ್ಷ' ಈಗ ದೆಹಲಿಯಲ್ಲಿ ಕ್ಲೈಮ್ಯಾಕ್ಸ್ ತಲುಪಿದೆ.

ಕ್ಲೈಮ್ಯಾಕ್ಸ್ ಕೌಂಟ್‌ಡೌನ್: ಇಂದ್ರಪ್ರಸ್ಥದಲ್ಲಿ ಸಂಧಾನ 

'ಕೌಂಟ್‌ಡೌನ್' ಶುರುವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಹೈವೋಲ್ಟೇಜ್ ಪಟ್ಟದಾಟಕ್ಕೆ ತೆರೆ ಎಳೆಯಲು ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ 'ಪಂಚಶಕ್ತಿ ಸಭೆ' ಇಂದ್ರಪ್ರಸ್ಥದಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಉನ್ನತ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವ ಸುಳಿವು ನೀಡಿದ್ದಾರೆ. ಮೂಲಗಳ ಪ್ರಕಾರ, ಶನಿವಾರದಂದು 'ರಾಜಮಾತೆ' (ಸೋನಿಯಾ ಗಾಂಧಿ) ಜೊತೆ ಖರ್ಗೆ ಮಾತುಕತೆ ನಡೆಸಲಿದ್ದು, ಅಲ್ಲಿಯೇ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

'ಕೊಟ್ಟ ಮಾತಿನ ಮರ್ಮ' ನೆನಪಿಸಿದ ಕನಕಪುರ ಬಂಡೆ

ಮುಖ್ಯಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಡಿ.ಕೆ. ಶಿವಕುಮಾರ್, ಹೈಕಮಾಂಡ್‌ನಿಂದ 'ಕೊಟ್ಟ ಮಾತಿನ ಮರ್ಮ ರಹಸ್ಯ'ವನ್ನು ನೆನಪಿಸಿದ್ದಾರೆ ಎಂದು ಹೇಳಲಾಗಿದೆ. ಮೊದಲಿಗೆ ಸಿಎಂ ಹುದ್ದೆ ಹಂಚಿಕೆ ಕುರಿತು ಆಗಿದ್ದ ಒಪ್ಪಂದವನ್ನು ಪಾಲಿಸಬೇಕು ಎಂಬುದು ಅವರ ಆಗ್ರಹವಾಗಿದೆ. ಕನಕಪುರ ಬಂಡೆಗೆ ತಮ್ಮ ಸಮುದಾಯದ ಬಲ ಮತ್ತು ಪ್ರಮುಖ ಸ್ವಾಮೀಜಿಗಳ ಆಶೀರ್ವಾದದ ಶಕ್ತಿ ಸಿಕ್ಕಿದ್ದು, ಇದು ಡಿಕೆಶಿ ಬಣಕ್ಕೆ ದೊಡ್ಡ ಬಲ ಬಂದಂತಾಗಿದೆ. 'ಪದತ್ಯಾಗನಾ? ಪಟ್ಟಾಭಿಷೇಕನಾ?' ಎಂಬ ಚರ್ಚೆ ದೆಹಲಿಯ ಅಂಗಳದಲ್ಲಿ ಬಿರುಸುಗೊಂಡಿದೆ.

ಸಿದ್ದರಾಮಯ್ಯ ಬಣದ 'ಅಹಿಂದ' ಅಸ್ತ್ರ

ಡಿಕೆಶಿ ಬಟ್ಟದಾಟದ ನಡುವೆ ಸಿದ್ದರಾಮಯ್ಯ ಸೇನೆ ಸುಮ್ಮನೆ ಕೂತಿಲ್ಲ. ತಮ್ಮ ಅಹಿಂದ ಬಲದ ಅಸ್ತ್ರವನ್ನು ಬಳಸಲು ಸಿಎಂ ಬಣ ಸಜ್ಜಾಗಿದೆ. ಸಿಎಂ ಆಪ್ತ ಸಚಿವರೊಬ್ಬರು, "ಅಧಿಕಾರ ಹಂಚಿಕೆಯ 'ಆ ಗುಟ್ಟು ಐದು ಜನರಿಗಷ್ಟೇ ಗೊತ್ತು'" ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಇನ್ನೊಂದೆಡೆ, ಕೆಲವು ಸ್ವಾಮೀಜಿಗಳು, "ಸಿದ್ದು ಸಿಎಂ ಸ್ಥಾನ ಬಿಡದಿದ್ದರೆ ಸರ್ಕಾರವೇ ಉರುಳತ್ತೆ," ಎಂಬಂತಹ ಹೇಳಿಕೆಗಳನ್ನು ನೀಡಿದ್ದು, ಸಂಘರ್ಷಕ್ಕೆ ಹೊಸ ತಿರುವು ನೀಡಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, 'ರಣರೋಚಕ ಚದುರಂಗ' ಆಟದಲ್ಲಿ ಯಾರ ವಿಜಯವಾಗಲಿದೆ ಎಂಬುದು ರಾಜ್ಯದ ಜನರ ಪ್ರಶ್ನೆಯಾಗಿದೆ. ಯಾರ ಪರ ಯಾರೇ ನಿಂತರೂ, 'ಕೈ ವರಿಷ್ಠರ ಶ್ರೀರಕ್ಷೆ' ಯಾರಿಗೆ ಸಿಗಲಿದೆ ಎಂಬುದೇ ನಿರ್ಣಾಯಕ. ಅಂತಿಮವಾಗಿ, ಸಿದ್ದರಾಮಯ್ಯ ಸಿಂಹಾಸನದಲ್ಲಿ ಭದ್ರರಾಗುತ್ತಾರೆಯೇ ಅಥವಾ ಡಿಕೆಶಿಯವರ 'ಪಟ್ಟಾಭಿಷೇಕ' ಶತಸಿದ್ಧವಾಗಿದೆಯೇ ಎಂಬುದಕ್ಕೆ ದೆಹಲಿಯಲ್ಲಿ ನಡೆಯಲಿರುವ ಪಂಚಶಕ್ತಿ ಸಭೆಯ ನಂತರ ಉತ್ತರ ಸಿಗಲಿದೆ.

Related Video