Ground Report : ದಾವಣಗೆರೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಫೈಟ್: ಟಿಕೆಟ್ ಕಸರತ್ತು ಜೋರು
ವೀರಶೈವ ಲಿಂಗಾಯತರ ಪ್ರಾಬಲ್ಯದ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಾಂಪ್ರದಾಯಿಕ ಎದುರಾಳಿಗಳು. ಜಿಲ್ಲೆಯಲ್ಲಿ ಟಿಕೆಟ್ ಫೈಟ್ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ದಾವಣಗೆರೆ; ದಾವಣಗೆರೆ ಉತ್ತರ ಕಾಂಗ್ರೆಸ್'ನ ಎಸ್.ಎಸ್ ಮಲ್ಲಿಕಾರ್ಜುನ ಹಾಗೂ ಬಿಜೆಪಿಯ ಎಸ್.ಎ ರವೀಂದ್ರನಾಥ್ ಅಖಾಡವಾಗಿದೆ. ಆದರೆ 77ರ ಗಡಿ ದಾಟಿದ ರವೀಂದ್ರನಾಥ ಸ್ಪರ್ಧಿಸುತ್ತಾರೋ, ಇಲ್ಲವೋ ಎಂಬ ಗೊಂದಲವಿದೆ. ಸಂಸದ ಸಿದ್ದೇಶ್ವರ್ ರಾಜ್ಯ ರಾಜಕಾರಣದ ಬಗ್ಗೆ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್‌ನ ಮಲ್ಲಿಕಾರ್ಜುನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಪಕ್ಷದ ಸೂಚನೆಯಂತೆ 2 ಲಕ್ಷ ರೂ. ಡಿಡಿ ಕಟ್ಟಿಲ್ಲ. ನಾನು ಅರ್ಜಿ ಸಲ್ಲಿಸುತ್ತೇನೆ. ಆದರೆ, 2 ಲಕ್ಷ ಕೊಡಲ್ಲ ಅನ್ನೋ ಮೂಲಕ ತಮ್ಮ ಟಿಕೆಟ್ ಪಕ್ಕಾ ಎಂಬ ಸಂದೇಶ ಸಾರಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಯಶವಂತರಾವ್ ಸೇರಿ ಅನೇಕರು ಟಿಕೆಟ್ ಆಕಾಂಕ್ಷಿಗಳು, ಜೆಡಿಎಸ್'ನಿಂದ ಜಿ. ಅಮಾನುಲ್ಲಾ ಸ್ಪರ್ಧಿಸುವ ಸಾಧ್ಯತೆಯಿದೆ. ಮಾಯಕೊಂಡದಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಿಜೆಪಿಯ ಪ್ರೊ.ಲಿಂಗಣ್ಣ ಟಿಕೆಟ'ಗೆ ಪ್ರಯತ್ನ ನಡೆಸುತ್ತಿದ್ದಾರೆ. ಜತೆಗೆ ಎಂ.ಬಸವರಾಜ ನಾಯ್ಕ, ಜಿ.ಎಸ್.ಶ್ಯಾಮ್ , ಅನಿಲ್ ಸೇರಿ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅದೇ ರೀತಿ ಕೆ.ಎಸ್.ಬಸವಂತಪ್ಪ, ಡಿ. ಬಸವರಾಜ, ಎಚ್.ದುಗ್ಗಪ್ಪ ಡಾ.ವೈ ರಾಮಪ್ಪ ಸೇರಿ ಹಲವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. 75 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ಬಿಜೆಪಿಯ ಅಲಿಖಿತ ನಿಯಮ ಅನ್ವಯವಾದರೆ ವಿರುಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಸ್ಪರ್ಧೆಗೆ ತಾಲೀಮು ನಡೆಸಿದ್ದಾರೆ. ಕಾಂಗ್ರೆಸ್ಸಿನಿಂದ ವಡ್ನಾಳ್ ರಾಜಣ್ಣ ಹೆಸರು ಕೇಳಿಬರ್ತಿದೆ. ಜೆಡಿಎಸ್‌ನಿಂದ ಇಲ್ಲಿ ಎಂ.ಯೋಗೇಶ ಪ್ರಬಲ ಆಕಾಂಕ್ಷಿ. ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಸ್ಪರ್ಧೆ ಸ್ಪಷ್ಟ.