ಮೊದಲೇ ಹೇಳಿದ್ದರೆ ಈಶ್ವರಪ್ಪ ರೀತಿ ರಾಜೀನಾಮೆ ಕೊಡುತ್ತಿದ್ದೆ, ಟಿಕೆಟ್ ಕೈತಪ್ಪಿದ್ದಕ್ಕೆ ರಘುಪತಿ ಭಟ್ ಕಣ್ಣೀರು!
ಟಿಕೆಟ್ ಇಲ್ಲ ಅನ್ನೋದನ್ನು ಯಾವುದೇ ನಾಯಕರು ಹೇಳಿಲ್ಲ. ಅದು ನನಗೆ ಬೇಸರ ತಂದಿದೆ. 1997ರಿಂದ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದೇನೆ. ಇದೀಗ ಏಕಾಏಕಿ ಟಿಕೆಟ್ ವಂಚಿಸಿರುವುದು ನೋವಾಗಿದೆ ಎಂದು ರಘುಪತಿ ಕಣ್ಣೀರಿಟ್ಟಿದ್ದಾರೆ.
ಉಡುಪಿ(ಏ.12): ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಬಂಡಾಯ ಶುರುವಾಗಿದೆ. ಇದೀಗ ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್‍ಗೂ ಟಿಕೆಟ್ ಕೈತಪ್ಪಿದೆ. ಇದರ ಬೆನ್ನಲ್ಲೇ ರಘುಪತಿ ಭಟ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ದುಃಖದಿಂದ ಕಣ್ಮೀರಿಟ್ಟಿದ್ದಾರೆ. ನನ್ನ ಜಾತಿ ಕಾರಣದಿಂದಲೇ ಟಿಕೆಟ್ ಕೈತಪ್ಪಿದೆ. ನಾನು ಜಿಲ್ಲೆಯಲ್ಲಿ ಅಭಿವೃದ್ದಿ ಮಾಡಿದ್ದೇನೆ, ಪಕ್ಷ ಸಂಘಟನೆ ಮಾಡಿದ್ದೇನೆ. ಆದರೂ ಟಿಕೆಟ್ ಕೈತಪ್ಪಿದೆ ಅಂದರೆ ಜಾತಿ ಕಾರಣ ಎಂದಿದ್ದಾರೆ. ಇದೇ ವೇಳೆ ರಘುಪತಿ ಭಟ್ ಭಾವುಕರಾಗಿದ್ದಾರೆ. ನನಗೆ ಟಿಕೆಟ್ ಇಲ್ಲ ಅನ್ನೋ ವಿಚಾರ ಯಾರೂ ಕೂಡ ಹೇಳಿಲ್ಲ. ಮೊದಲೇ ಹೇಳಿದ್ದರೆ ಈಶ್ವರಪ್ಪ ರೀತಿ ರಾಜೀನಾಮೆ ಕೊಡುತ್ತಿದ್ದೆ ಎಂದು ರಘುಪತಿ ಭಟ್ ಹೇಳಿದ್ದಾರೆ.