ಕಾಂಗ್ರೆಸ್ ಸಮಾವೇಶ ಬೆನ್ನಲ್ಲೇ ಎಚ್ಚೆತ್ತ ದಳಪತಿಗಳು; ತಿರುಗೇಟು ನೀಡಲು ದಳಪಡೆ ಸಜ್ಜು!
ಕಾಂಗ್ರೆಸ್ ಸಮಾವೇಶಕ್ಕೆ ಪ್ರತಿಯಾಗಿ ಡಿಸೆಂಬರ್ 15 ರಂದು ಮಂಡ್ಯದಲ್ಲಿ ಕುಮಾರಸ್ವಾಮಿ ಅವರ ಅಭಿನಂದನಾ ಸಮಾವೇಶವನ್ನು ಜೆಡಿಎಸ್ ಆಯೋಜಿಸುತ್ತಿದೆ. 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಗುರಿಯನ್ನು ಹೊಂದಿದ್ದು, ಚನ್ನಪಟ್ಟಣ ಸೋಲಿನ ಹತಾಶೆಯಲ್ಲಿರುವ ಕಾರ್ಯಕರ್ತರನ್ನು ಹುರಿದುಂಬಿಸುವುದು ಮತ್ತು ಮೈತ್ರಿಯಾಗಿ ಮುಂಬರುವ ಚುನಾವಣೆಗಳನ್ನು ಎದುರಿಸುವುದು ಇದರ ಉದ್ದೇಶವಾಗಿದೆ.
ದೇವೇಗೌಡರ ತವರಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿರುವ ಬೆನ್ನಲ್ಲಿಯೇ ಕಾಂಗ್ರೆಸ್ ಸಮಾವೇಶಕ್ಕೆ ತಿರುಗೇಟು ನೀಡಲು ದಳಪಡೆ ಸಜ್ಜುಗೊಂಡಿದೆ. ಬೃಹತ್ ಸಮಾವೇಶದ ಮೂಲಕವೇ ಕೈ ನಾಯಕರಿಗೆ ಕೌಂಟರ್ ಕೊಡಲು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮ ಹೆಸರಲ್ಲಿ ಸಮಾವೇಶ ಮಾಡಲು ಮುಂದಾಗಿದೆ. ಇದಕ್ಕಾಗಿ ಡಿಸೆಂಬರ್ 15ರಂದು ಮಂಡ್ಯದಲ್ಲಿ ಕುಮಾರಸ್ವಾಮಿ ಅಭಿನಂದನಾ ಸಾವೇಶ ಆಯೋಜನೆಗೆ ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಡಿ.16ರಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಡಿಸೆಂಬರ್ 15ರಂದು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಇದನ್ನು ಮಂಡ್ಯದ ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಈ ಅಭಿನಂದನಾ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನ ಸೇರಿಸಲು ಜೆಡಿಎಸ್ ನಾಯಕರು ಗುರಿ ಇಟ್ಟುಕೊಂಡಿದ್ದಾರೆ. ಚನ್ನಪಟ್ಟಣ ಸೋಲಿನ ಹತಾಶೆಯಲ್ಲಿರುವ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದೊಂದಿಗೆ ಜೆಡಿಎಸ್ ಈ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾಗಿದ್ದು, ಈ ಸಮಾವೇಶದಲ್ಲಿ ಬಿಜೆಪಿ ನಾಯಕರನ್ನೂ ಸೇರಿಸಲು ಚಿಂತನೆ ಮಾಡಲಾಗುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಪ್ರಾಬಲ್ಯ ಕುಗ್ಗದಂತೆ ತಡೆಯುವ ಯತ್ನ ಮಾಡಲಾಗುತ್ತದೆ. ಹೀಗಾಗಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಇವರೊಂದಿಗೆ ಮಾಜಿ ಶಾಸಕ ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ. ಒಟ್ಟಾರೆಯಾಗಿ ಜೆಡಿಎಸ್ ಅಭಿನಂದನಾ ಸಮಾವೇಶದ ಮೂಲಕ ಮೈತ್ರಿಯಾಗಿಯೇ ಮುಂಬರುವ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ.