ಗೊರವಯ್ಯ ಭವಿಷ್ಯವಾಣಿ ಪ್ರಕಾರ ನಾನು 5 ವರ್ಷ ಸಿಎಂ ಆಗೋದು ಖಚಿತ; ಎಚ್‌ಡಿಕೆ ವಿಶ್ವಾಸ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ನಾನು ಮತ್ತೆ ಮುಖ್ಯಮಂತ್ರಿಯಾಗೋದು ಖಚಿತ ಎಂದು ಎಚ್‌ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು, (ಫೆ.25): ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರದ ಕಾರ್ಣಿಕ ವಾಣಿಯನ್ನು ವಿಶ್ಲೇಷಿಸಿದ್ದು, ನೈರುತ್ಯ ಭಾಗದ ಪ್ರಭಾವಿ ಮುಖಂಡ ಮುಂದೆ ರಾಜ್ಯವನ್ನಾಳುತ್ತಾನೆ. ಕುಬೇರನ ಸ್ಥಾನದಲ್ಲಿರುವ ವ್ಯಕ್ತಿ ಮುಂದಿನ ರಾಜಕಾರಣ ಮಾಡ್ತಾನೆ. ಅವರ ಅವಧಿಯಲ್ಲಿ ರಾಜ್ಯದ ಜನರು ಸಂಪನ್ನರಾಗುತ್ತಾರೆ. ಸುಖ ಶಾಂತಿ ಸಂಪತ್ತು ನೀಡುವ ರಾಜಕಾರಣಿ ಬರ್ತಾನೆ. ಮುಂಬರುವ ಸರ್ಕಾರ ಐದು ವರ್ಷಗಳ ಕಾಲ ಸಂಪತ್ಪರಿತವಾಗಿ ಇರುತ್ತದೆ ಎಂದಿದ್ದಾರೆ.
ಮೈಲಾರ ಕಾರ್ಣಿಕ ವಿಶ್ಲೇಷಣೆ: ನೈಋತ್ಯ ಭಾಗದ ಪ್ರಭಾವಿ ರಾಜ್ಯಭಾರ ಮಾಡಲಿದ್ದಾರೆ, ಯಾರು ಅವರು?
ಮೈಲಾರದ ಕಾರ್ಣಿಕ ವಾಣಿ ವಿಶ್ಲೇಷಿಸಿದಂತೆ, ಕರ್ನಾಟಕದ ನೈಋತ್ಯ ಭಾಗವೆಂದರೆ ಹಳೇ ಮೈಸೂರು ಭಾಗ. ಸದ್ಯ ಈ ಭಾಗದ ಪ್ರಭಾವಿ ವ್ಯಕ್ತಿಗಳೆಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ. ಈಗಾಗಲೇ ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಶುರುವಾಗಿದೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರೂ ಇಲ್ಲ.
ಈ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ನಾನು ಮತ್ತೆ ಮುಖ್ಯಮಂತ್ರಿಯಾಗೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.