
ಆರ್.ಆರ್. ನಗರ ರಾಜಕೀಯ ಸುನಾಮಿಗೆ ನಾಂದಿ ಹಾಡಿದ ಕರಿಟೋಪಿ; ಎಲ್ಲವೂ ಹೆಣ್ಣಿನಿಂದ ಎಂದ ಮುನಿರತ್ನ!
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಾಸಕ ಮುನಿರತ್ನರನ್ನು 'ಕರಿ ಟೋಪಿ' ಎಂದು ಕರೆದಿದ್ದು ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಈ ಘಟನೆಯು ತಾರಕಕ್ಕೇರಿ, ಮುನಿರತ್ನ ಅವರು ಡಿಕೆ ಸಹೋದರರ ವಿರುದ್ಧ ಕೊಲೆ ಸಂಚಿನ ಗಂಭೀರ ಆರೋಪ ಮಾಡಲಾಗಿದೆ.
ಬೆಂಗಳೂರು (ಅ.13): ರಾಜಕೀಯದಲ್ಲಿ ಆಳ ಸಮುದ್ರದಂತೆ ಶಾಂತವಾಗಿರುವ ಪರಿಸ್ಥಿತಿ ಯಾವಾಗ ಬೇಕಾದರೂ ಘನಘೋರ ಸುನಾಮಿಯಾಗಿ ಬದಲಾಗಬಹುದು ಎಂಬುದಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ಕ್ಷೇತ್ರದಲ್ಲಿ ನಡೆದ ಇತ್ತೀಚಿನ ಘಟನೆಯೇ ಸಾಕ್ಷಿ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಮತ್ತು ಸ್ಥಳೀಯ ಶಾಸಕ, ಮಾಜಿ ಮಿತ್ರ ಮುನಿರತ್ನ ನಡುವಿನ ದೀರ್ಘಕಾಲದ ರಾಜಕೀಯ ಜಿದ್ದಾಜಿದ್ದಿ ಮತ್ತೊಮ್ಮೆ ಬೀದಿಗೆ ಬಂದಿದ್ದು, ಬೆಳ್ಳಂಬೆಳಗ್ಗೆಯೇ ನಡೆದ ಹೈಡ್ರಾಮಾ ರಾಜ್ಯ ರಾಜಕೀಯದಲ್ಲಿ ಕರಿ ಟೋಪಿ ಕುರುಕ್ಷೇತ್ರಕ್ಕೆ ನಾಂದಿ ಹಾಡಿದೆ.
ಒಂದೇ ಮಾತಿಗೆ ಸ್ಫೋಟ ಉದ್ಯಾನದ ವೇದಿಕೆಯೇ ಯುದ್ಧಭೂಮಿ:
ಬೆಂಗಳೂರಿನ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಡಿ.ಕೆ. ಶಿವಕುಮಾರ್ ಅವರು ಭಾನುವಾರ (ಅಕ್ಟೋಬರ್ 12, 2025) ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಜೆ.ಪಿ. ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ 'ಬೆಂಗಳೂರು ನಡಿಗೆ' ಎಂಬ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ರಾಜಕೀಯ ರಣರಂಗವಾಗಿ ಮಾರ್ಪಟ್ಟಿತು. ಬಿಜೆಪಿ ಶಾಸಕ ಮುನಿರತ್ನ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಗಣವೇಷಧಾರಿ ಸಮವಸ್ತ್ರವಾದ 'ಕರಿ ಟೋಪಿ' (ಕಪ್ಪು ಟೋಪಿ) ಧರಿಸಿ ಸಾರ್ವಜನಿಕರ ನಡುವೆ ಬಂದು ಕುಳಿತಿದ್ದರು. ಇದೇ ವೇಳೆ, ಡಿಕೆಶಿ ಅವರು ಮುನಿರತ್ನ ಅವರನ್ನು ವೇದಿಕೆಗೆ ಕರೆಯುವ ಭರದಲ್ಲಿ, 'ಏಯ್ ಕರಿ ಟೋಪಿ ಎಂಎಲ್‌ಎ ಬಾ ಇಲ್ಲಿ' ಎಂದು ಕರೆದಿದ್ದು ಘರ್ಷಣೆಗೆ ಕಾರಣವಾಯಿತು.
ಡಿಸಿಎಂ ಅವರ ಈ ಏಕವಚನದ ಮಾತು ಮತ್ತು 'ಕರಿ ಟೋಪಿ' ಉಲ್ಲೇಖದಿಂದ ಕೆರಳಿದ ಮುನಿರತ್ನ, ವೇದಿಕೆಗೆ ನುಗ್ಗಿ ಡಿಕೆಶಿ ಬಳಿಯಿದ್ದ ಮೈಕ್ ಅನ್ನು ಪಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದು ಸರ್ಕಾರದ ಕಾರ್ಯಕ್ರಮವೇ? ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೇ? ಶಾಸಕನಾದ ನನಗೆ ಆಹ್ವಾನವಿಲ್ಲ, ನನ್ನ ಫೋಟೋವನ್ನು ಹಾಕಿಲ್ಲ, ಇದು ಕ್ಷೇತ್ರದ ಶಾಸಕನಿಗೆ ಮಾಡಿದ ಅವಮಾನ ಎಂದು ಮುನಿರತ್ನ ಗುಡುಗಿದರು. ಅವರ ಈ ವರ್ತನೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘೋಷಣೆಗಳು, ವಾಗ್ವಾದಗಳು ನಡೆದು ಪರಿಸ್ಥಿತಿ ಗದ್ದಲಮಯವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಮುನಿರತ್ನ ಅವರನ್ನು ಸ್ಥಳದಿಂದ ಕರೆದೊಯ್ಯಬೇಕಾಯಿತು.
ಹಲ್ಲೆ.. ಅವಮಾನ.. ಕೊಲೆಯತ್ನ ಆರೋಪ!
ಈ ಕಾರ್ಯಕ್ರಮದಿಂದ ಹೊರಬಂದ ಮುನಿರತ್ನ ಅವರು ಡಿಸಿಎಂ ಸಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದರು. 'ನನ್ನ ರಾಜಕೀಯ ಜೀವನವನ್ನು ನಾಶ ಮಾಡಲು ಡಿಕೆ ಬ್ರದರ್ಸ್ ಸಂಚು, ಷಡ್ಯಂತ್ರ, ಮಾಟ ಮಾಡುತ್ತಿದ್ದಾರೆ. ನನ್ನ ರಾಜಕೀಯ ಎದುರಾಳಿ, ದಿವಂಗತ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರನ್ನು ಶಾಸಕಿ ಮಾಡಲು ನನ್ನ ಕೊಲೆಗೂ ಸಂಚು ನಡೆಸಿದ್ದಾರೆ. ಈ ಕುರುಕ್ಷೇತ್ರಕ್ಕೆ ಹೆಣ್ಣೇ ಕಾರಣ. ಆರೆಸ್ಸೆಸ್ ಸಮವಸ್ತ್ರವನ್ನು ಅವಮಾನಿಸಿದ್ದಾರೆ' ಎಂದು ಮುನಿರತ್ನ ಬಾಂಬ್ ಸಿಡಿಸಿದರು. ಇಡೀ ಬೆಂಗಳೂರು ರಾಜಕೀಯದಲ್ಲಿ ಕಂಪನ ಸೃಷ್ಟಿಸಿದ ಈ 'ಕರಿ ಟೋಪಿ' ಕುರುಕ್ಷೇತ್ರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಕೇಸರಿ ಪಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಕೆಶಿ ಅವರದ್ದು 'ಊಳಿಗಮಾನ್ಯ ಧೋರಣೆ' ಎಂದು ಟೀಕಿಸಿದೆ.
ಶುರುವಾಗಿದ್ದು ಹೇಗೆ ಡಿ.ಕೆ.-ಮುನಿರತ್ನ ಜಿದ್ದಾಜಿದ್ದಿ?
ಒಂದು ಕಾಲದಲ್ಲಿ ಡಿಕೆಶಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್‌ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ಮುನಿರತ್ನ, 2019 ರಲ್ಲಿ 'ಆಪರೇಷನ್ ಕಮಲ'ದಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳುವಾಗ ಬಿಜೆಪಿ ಸೇರಿ ರಾಜೀನಾಮೆ ನೀಡಿದ್ದರು. ನಂತರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಬಂದರು. ಅಂದಿನಿಂದ ಆರ್.ಆರ್. ನಗರ ಕ್ಷೇತ್ರದ ಹಿಡಿತಕ್ಕಾಗಿ ಡಿಕೆ ಬ್ರದರ್ಸ್ ಮತ್ತು ಮುನಿರತ್ನ ನಡುವೆ ನಿರಂತರ ರಾಜಕೀಯ ಸಂಘರ್ಷ ನಡೆಯುತ್ತಲೇ ಇದೆ. ಮುನಿರತ್ನ ಅವರು ಡಿಕೆಶಿ ವಿರುದ್ಧ ಕಮಿಷನ್ ಆರೋಪ ಮಾಡಿ ಇಡಿ ಮತ್ತು ರಾಜ್ಯಪಾಲರಿಗೆ ದೂರು ನೀಡಿರುವುದು, ಕ್ಷೇತ್ರ ಅನುದಾನ ವಿಚಾರದಲ್ಲಿ ಕಿತ್ತಾಟ ಮುಂದುವರೆದಿದ್ದು, ರಾಜರಾಜೇಶ್ವರಿ ನಗರದಲ್ಲಿ ಇವರಿಬ್ಬರ ಜಗಳ ತಾರಕಕ್ಕೇರಿದೆ. ಈ ರಾಜಕೀಯ ಹೈಡ್ರಾಮಾ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.