ಈಶ್ವರಪ್ಪ ಬಂಧನ ಆಗ್ರಹಿಸಿ ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಡಿಕೆಶಿ ನೇತೃತ್ವ!
*ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ನಾಳೆಯಿಂದ ಕಾಂಗ್ರೆಸ್ ಹೋರಾಟ
*ವಿಧಾನಸೌಧದ ಧರಣಿ ಅಂತ್ಯ: ರಾಜ್ಯಾದ್ಯಂತ 5 ದಿನ, 10 ತಂಡದ ಪ್ರವಾಸ
ಬೆಂಗಳೂರು (ಏ. 16): ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ 24 ಗಂಟೆಗಳ ಅಹೋರಾತ್ರಿ ಧರಣಿ ಶುಕ್ರವಾರ ಮಧ್ಯಾಹ್ನಕ್ಕೆ ಅಂತ್ಯವಾಗಿದ್ದು, ಇದರ ಬೆನ್ನಲ್ಲೇ ಶನಿವಾರದಿಂದಲೇ ಈಶ್ವರಪ್ಪ ಬಂಧನ ಹಾಗೂ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಹತ್ತು ಪ್ರತ್ಯೇಕ ತಂಡಗಳೊಂದಿಗೆ ರಾಜ್ಯಮಟ್ಟದ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ ಪ್ರಮುಖ ಹತ್ತು ನಾಯಕರ ನೇತೃತ್ವದಲ್ಲಿ ಏ.16 ರಿಂದ 20ರವರೆಗೆ ಐದು ದಿನ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರತಿಭಟನೆ ನಡೆಸಲಿದ್ದಾರೆ. ಜತೆಗೆ ಶನಿವಾರ ವಿಜಯಪುರ ಜಿಲ್ಲೆ ಹೊಸಪೇಟೆಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ಹಾಗೂ ಬಿಜೆಪಿ ಪಕ್ಷ ಎರಡರ ಮೇಲೂ ಹೋರಾಟ ತೀವ್ರಗೊಳಿಸಿ ಒತ್ತಡ ಹಾಕಲು ನಿರ್ಧಾರ ಮಾಡಲಾಗಿದೆ.
ಇದನ್ನೂ ನೋಡಿ: ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೇ ಗರಿಗೆದರಿದ ಸಚಿವ ಸಂಪುಟ ಪುನಾರಚನೆ ಲೆಕ್ಕಾಚಾರ
ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗದಗ, ಹಾವೇರಿ, ಹುಬ್ಬಳ್ಳಿ ಧಾರವಾಡ ನಗರ-ಗ್ರಾಮಾಂತರ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದೆ. ಇನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ ಭಾಗದಲ್ಲಿ ಹೋರಾಟ ನಡೆಸಲಾಗುವುದು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಏ.18 ರಿಂದ 20ರವರೆಗೆ ಕ್ರಮವಾಗಿ ಚಿಕ್ಕೋಡಿ, ಬೆಳಗಾವಿ ನಗರ, ಗ್ರಾಮಾಂತರ, ಬಾಗಲಕೋಟೆ ಜಿಲ್ಲೆಗಳಲ್ಲಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರ ಪೈಕಿ ರಾಮಲಿಂಗಾರೆಡ್ಡಿ ಅವರು ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ, ಸಲೀಂ ಅಹಮದ್ ಅವರು ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಜಿಲ್ಲೆ, ಈಶ್ವರ್ ಖಂಡ್ರೆ ಅವರು ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆ, ಸತೀಶ್ ಜಾರಕಿಹೊಳಿ ಅವರು ಉತ್ತರ ಕನ್ನಡ, ದಾವಣಗೆರೆ, ವಿಜಯಪುರ ಹಾಗೂ ಧ್ರುವನಾರಾಯಣ ಅವರು ಕೊಪ್ಪಳ, ಕೊಡಗು ಜಿಲ್ಲೆಗಳಲ್ಲಿ ಹೋರಾಟ ನಡೆಸಿ ಈಶ್ವರಪ್ಪ ಬಂಧನಕ್ಕೆ ಒತ್ತಾಯ ಮಾಡಲಿದ್ದಾರೆ.