ಕಾಂಗ್ರೆಸ್‌ ಪ್ರಣಾಳಿಕೆ ಸುಟ್ಟು ಬಜರಂಗದಳ ಆಕ್ರೋಶ

ಬಜರಂಗದಳವನ್ನು ನಿಷೇಧ ಮಾಡುವುದಾಗಿ ಹೇಳಿದ ಕಾಂಗ್ರೆಸ್‌ ವಿರುದ್ಧ ವಿವಿಧೆಡೆ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್‌ ಪ್ರಣಾಳಿಕೆಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು. ರಾಜ್ಯಾದ್ಯಂತ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ ಕೊಡಲಾಗಿದೆ.

First Published May 3, 2023, 7:10 PM IST | Last Updated May 3, 2023, 7:10 PM IST

ಬೆಂಗಳೂರು (ಮೇ 3): ಭಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಹಿಂದೂ ಮುಖಂಡರು ಕೆಂಡ ಕಾರಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಸೋಲಿಸಲು ಫೀಲ್ಡಿಗಿಳಿಯಲು ಭಜರಂಗದಳ ಕರೆ ನೀಡಿದೆ. ಅಲ್ಲದೇ ನಾಳೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ ಕೊಡಲಾಗಿದೆ.

ನಿನ್ನೆ ಮಂಗಳೂರು ನಗರದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. ಭಜರಂಗದಳ ನಿಷೇಧ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ವಿಚಾರವಾಗಿ, ಮಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಭಜರಂಗದಳ ಪ್ರತಿಭಟನೆ ಮಾಡಲಾಗಿದೆ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ಬ್ಯಾನ್‌ ಮಾಡುವುದಾಗಿ ಹೇಳಿದ್ದು, ಇದು ಇದೀಗ ಕೇಸರಿ ಪಡೆಗೆ ಅಸ್ತ್ರವಾಗಿದೆ. ಅಲ್ಲದೇ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಭಜರಂಗದಳ ಅಭಿಯಾನ ಆರಂಭಿಸಿದ್ದು, ನಾಳೆ ಸಂಜೆ ಏಳು ಗಂಟೆಗೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ ಕೊಡಲಾಗಿದೆ.

ಈ ಮೂಲಕ ಬಿಜೆಪಿಗೆ ಮತ್ತೊಂದು ಹಿಂದುತ್ವದ ಅಸ್ತ್ರ ಸಿಕ್ಕಂತಾಗಿದೆ. ಇನ್ನೂ ಈ ಬಗ್ಗೆ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಅವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಇದು ಅವರ ತಿರುಕನ ಕನಸು, ಬಂದ್ರೆ ತಾನೇ ಬ್ಯಾನ್‌ ಮಾಡೋದು ಎಂದು ಬಿಎಸ್‌ವೈ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.