Assembly Election: ಸಚಿವ ಸೋಮಣ್ಣ ಜೊತೆ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ?
ಪಕ್ಷಾಂತರ ವಿಚಾರದ ಬಗ್ಗೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, ರಾಜಕಾರಣದಲ್ಲಿ ಕವಲುದಾರಿಗಳಿರುತ್ತವೆ. ನಾನೇನು ಸನ್ಯಾಸಿ ಅಲ್ಲ. ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ನಿಂತ್ಕೋತೀನಿ. ಎಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ.
ಬೆಂಗಳೂರು (ಮಾ.13): ವಸತಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪಕ್ಷಾಂತರ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಕವಲುದಾರಿಗಳಿರುತ್ತವೆ, ನಾನೇನು ಸನ್ಯಾಸಿ ಅಲ್ಲ. ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ನಿಂತ್ಕೋತೀನಿ, ಇಲ್ಲವೆಂದರೆ ಇಲ್ಲ. ನಾನು ಯಾವತ್ತಾದರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೇನಾ.? ಎಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನನ್ನ ಸ್ನೇಹಿತರಾಗಿದ್ದು, ಅವರ ಕೆಲಸ ಅವರು ಮಾಡುತ್ತಾರೆ. ನನ್ನ ಕೆಲಸ ನಾನು ಮಾಡುತ್ತೇನೆ ಎಮದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವಿ. ಸೋಮಣ್ಣ ಅವರು ತಮ್ಮ ಮಗನಿಗೆ ರಾಜಾಜಿನಗರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರು ಪ್ರಭಲರಾಗಿದ್ದು, ವಿಜಯನಗರದಲ್ಲಿ ಕೃಷ್ಣಪ್ಪ ಮತ್ತು ಗೋವಿಂದರಾಜನಗರದಲ್ಲಿ ಅವರ ಪುತ್ರ ಪ್ರಿಯಾಕೃಷ್ಣ ಅವರಿಗೆ ಕಾಂಗ್ರೆಸ್‌ನಿಂದ ಕ್ಷೇತ್ರ ಬಿಟ್ಟುಕೊಡಬೇಕಾಗಬಹುದು. ಈ ಹಿನ್ನೆಲೆಯಲ್ಲಿ ರಾಜಾಜಿನಗರದ ಕಾಂಗ್ರೆಸ್ ಟಿಕೆಟ್ ಅನ್ನು ಅರುಣ್ ಸೋಮಣ್ಣ ಅವರಿಗೆ ನೀಡಿದರೆ ತಾವು ಬೇರೊಂದು ಕ್ಷೇತ್ರಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.