ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಿಗ್ ಇಂಪ್ಯಾಕ್ಟ್ : ಕಾಂಬೋಡಿಯಾದಲ್ಲಿ ಲಾಕ್ ಆಗಿದ್ದ ಕನ್ನಡಿಗನ ರಕ್ಷಣೆ

ನೂರಾರು ಕನಸು ಕಟ್ಟಿಕೊಂಡು ವಿದೇಶಕ್ಕೆ ಹೋಗುವ ಯುವಕರು ಈ ಸ್ಟೋರಿ ನೋಡಲೇ ಬೇಕು. ಸಾವಿರಾರು ಕಿ.ಮೀ ದೂರದ ಊರಿನಲ್ಲಿ ಉದ್ಯೋಗದ ಹೆಸರಲ್ಲಿ ಮೋಸ ಹೋದ ಯುವಕ ಸುವರ್ಣ ನ್ಯೂಸ್ ವರದಿಯಿಂದಾಗಿ ಮರಳಿ ತಾಯ್ನಾಡು ಸೇರಿದ ರೋಚಕ ಸ್ಟೋರಿ ಇದು.
 

First Published Nov 7, 2023, 11:22 AM IST | Last Updated Nov 7, 2023, 11:22 AM IST

ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ಚಿಕ್ಕಮಗಳೂರಿನ(Chikkamagaluru) NR ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಅಮಾಯಕ ಯುವಕನೊಬ್ಬ ಏಜೆಂಟ್ ಬಲೆಗೆ ಬಿದ್ದು  ಕಾಂಬೋಡಿಯಾದಲ್ಲಿ(Cambodia) ಲಾಕ್ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಏಷ್ಯಾಯಾನೆಟ್ ಸುವರ್ಣ ನ್ಯೂಸ್ ನಿರಂತರ ವರದಿ ಪ್ರಸಾರ ಮಾಡಿತ್ತು. ಇದ್ರ ಫಲವಾಗಿ ಭಾರತೀಯ(India) ವಿದೇಶಾಂಗ ಸಚಿವಾಲಯದ ಮೂಲಕ ಯುವಕನನ್ನು ಕ್ಷೇಮವಾಗಿ ಭಾರತಕ್ಕೆ ಕರೆತರಲಾಗಿದೆ. ಭಾನುವಾರ ತಡರಾತ್ರಿ ಬೆಂಗಳೂರಿಗೆ(Bengaluru) ಬಂದಿಳಿದಿರುವ ಅಶೋಕ್ ವಿದೇಶದಲ್ಲಿ ಭಾರತೀಯರು ಮೋಸ ಹೋಗುತ್ತಿರುವ ರೋಚಕ ಕಥೆಯೊಂದನ್ನು ತೆರೆದಿಟ್ಟಿದ್ದಾರೆ. ಒಂದೊಳ್ಳೆ ಕೆಲಸ ಬೇಕು.. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಆಸೆಯಿಂದ ವಿದೇಶಕ್ಕೆ ಹಾರುವ ಯುವಕರು ಸುಲಭವಾಗಿ ಏಜೆಂಟ್ಗಳ ಬಲೆಗೆ ಬೀಳುತ್ತಾರೆ. ನಮ್ಮವರೇ ಯಾರೋ ಅಲ್ಲಿ ಕೆಲಸ ಮಾಡುತ್ತಿದ್ದಾರೆ, ಲಕ್ಷ ಲಕ್ಷ ಹಣ ಮಾಡುತ್ತಿದ್ದಾರೆ ಅನ್ನೋ ಆಮಿಷವೊಡ್ಡಿ ಲಕ್ಷ ಲಕ್ಷ ಕಮಿಷನ್ ಪೀಕುತ್ತಾರೆ. ಇಷ್ಟಕ್ಕೆ ಸುಮ್ಮನಾಗದೆ ಅಲ್ಲಿಯ ಚೀನಾ ಕಂಪನಿಗಳಿಗೆ ಮುಗ್ದ ಯುವಕರನ್ನು ಮಾರಾಟ ಮಾಡಲಾಗುತ್ತದೆ. ಅಲ್ಲಿಗೆ ಆತನ ಕಥೆ ಮುಗಿಯಿತು. ಸಾಯುವವರೆಗೂ ಆತ ಗುಲಾಮನಾದಂತೆಯೇ.‌ ಅತ್ತ ಸಂಬಳವೂ ಇಲ್ಲ, ಇತ್ತ ಸ್ವಾತಂತ್ರ್ಯವೂ ಇಲ್ಲದ ಮೃತ್ಯು ಕೂಪಕ್ಕೆ ಯುವಕರನ್ನು ತಳ್ಳಲಾಗುತ್ತೆ ಅನ್ನೋ ಭಯಾನಕ ಸೀಕ್ರೆಟ್ ಬಿಚ್ಚಿಟ್ಟಿದ್ದಾನೆ ಅಶೋಕ್.

ಇಂತಹದ್ದೊಂದು ವಂಚನೆಯ ಜಾಲಕ್ಕೆ ಸಿಕ್ಕುಬಿದ್ದಿದ್ದ ಅಶೋಕ್ ಕಣ್ಣೀರಿಡುತ್ತಾ ಮನೆಗೆ ಕರೆ ಮಾಡಿದಾಗ ಹೆತ್ತವರಿಗೆ ದಿಕ್ಕೇ ತೋಚದಾಗಿತ್ತು. ವಿಷಯ ತಿಳಿದ ಸುವರ್ಣ ನ್ಯೂಸ್ ಈ ಬಗ್ಗೆ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು.  ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಯಭಾರ ಕಚೇರಿ ಜೊತೆ ಮಾತನಾಡಿದ್ದರು. ಅಲ್ಲದೇ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣಾ ಮೂಲಕ ಭಾರತೀಯ ರಾಯಭಾರ ಕಚೇರಿಗೆ ವಿಷಯ ತಲುಪಿಸಲಾಗಿತ್ತು. ಇದೆಲ್ಲದರ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಯುವಕ ಅಶೋಕ್ ತವರಿಗೆ ಸುರಕ್ಷಿತವಾಗಿ ಪಾಸಾಗಿದ್ದಾನೆ.

ಮಗ ಫೋನ್ ಮಾಡಿ ಕಣ್ಣೀರು ಹಾಕುತ್ತಿದ್ದಾಗ ಏನು ಮಾಡಬೇಕು ಅಂತಾನೇ ಗೊತ್ತಾಗ್ಲಿಲ್ಲ. ನಮ್ಮ ಮನೆ ಅಡ ಇಟ್ಟಾದ್ರೂ ಹಣ ಹೊಂದಿಸಿ ಕೊಡೋಣ ಅಂತ ಹೋಗಿದ್ದೆ. ಆದ್ರೆ ನಮ್ಮ ಮನೆಗೆ ದಾಖಲೆಯೇ ಇರಲಿಲ್ಲ. ಕೊನೆಗೆ ಸುವರ್ಣ ನ್ಯೂಸ್ ಅವರು ನನ್ನ ಮನೆಗೆ ಬಂದು ವರದಿ ಪ್ರಸಾರ ಮಾಡಿದ್ರು. ಹೀಗಾಗಿ ನನ್ನ ಮಗ ಮರಳಿ ಬರೋದಕ್ಕೆ ಸಾಧ್ಯವಾಯ್ತು ಅಂತ ನೆನೆದು ಕಣ್ಣೀರು ಹಾಕಿದ್ರು ಅಶೋಕ್ ತಂದೆ ಸುರೇಶ್.

ಇದನ್ನೂ ವೀಕ್ಷಿಸಿ: ರಾಜ್ಯಾದ್ಯಂತ ಬರ ಅಧ್ಯಯನ ಕೈಗೊಂಡ ‘ಕೇಸರಿ’ ಪಡೆ: ರೈತರೊಂದಿಗೆ ಸಮಾಲೋಚನೆ ನಡೆಸಿದ ಬಿಜೆಪಿ ಲೀಡರ್ಸ್