Uttara Kannada: ಹೆಣ್ಣು ಮಕ್ಕಳು ನಾಪತ್ತೆ ಕೇಸ್ ಹೆಚ್ಚಳ, ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೋವು.!

- ಹೆಣ್ಣು ಮಕ್ಕಳು, ಮಹಿಳೆಯ ನಾಪತ್ತೆ ಪ್ರಕರಣಗಳಲ್ಲಿ ಹೆಚ್ಚಳ

- ಪ್ರೀತಿ- ಪ್ರೇಮ-ಮೋಸ ಹಾಗೂ ಇತರ ವಿಚಾರಗಳಿಂದಾಗಿ ನಾಪತ್ತೆ

- ಕಳೆದೊಂದು ವರ್ಷದಲ್ಲಿ  150 ನಾಪತ್ತೆ ಪ್ರಕರಣಗಳ ದಾಖಲು

- ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿರುವ ಕೇಸ್‌
 

First Published Dec 21, 2021, 2:30 PM IST | Last Updated Dec 21, 2021, 2:31 PM IST

ಉತ್ತರಕನ್ನಡ (ಡಿ. 21):  ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು (Women) ಹಾಗೂ ಮಹಿಳೆಯ ನಾಪತ್ತೆ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಅಪ್ರಾಪ್ತ ಹೆಣ್ಣು ಮಕ್ಕಳಿಂದ ಹಿಡಿದು 18 ವರ್ಷ ಮೇಲ್ಪಟ್ಟ ಯುವತಿಯರು ಹಾಗೂ ಮಹಿಳೆಯರು ಕೂಡಾ ಪ್ರೀತಿ- ಪ್ರೇಮ ಹಾಗೂ ಇತರ ವಿಚಾರಗಳಿಂದಾಗಿ ಕಾಣೆಯಾಗುತ್ತಿದ್ದು, ಇವರನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ (Police Department) ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. 

ಕೊರೊನಾದಿಂದ ರಕ್ಷಣೆ ಒದಗಿಸಲು ಸರಕಾರದ ಆದೇಶದನ್ವಯ ಶಾಲೆ- ಕಾಲೇಜುಗಳನ್ನು ಮುಚ್ಚಿ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿತ್ತು. ಮನೆಯಲ್ಲಿದ್ದುಕೊಂಡು ಆನ್‌ಲೈನ್ ಚಟ ಬೆಳೆಸಿಕೊಂಡು ಅಪ್ರಾಪ್ತ ವಿದ್ಯಾರ್ಥಿಗಳು ಹಾಗೂ ಯುವಕರು- ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ- ಪ್ರೇಮ ಎಂಬ ವಿಚಾರಕ್ಕೆ ಬಿದ್ದು ನಾಪತ್ತೆಯಾಗುತ್ತಿದ್ದಾರೆ. 

ಉತ್ತರಕನ್ನಡ ಜಿಲ್ಲೆಯಲ್ಲಿ (Uttara Kannada)ಕಳೆದೊಂದು ವರ್ಷದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು, ಕಾಲೇಜು ಯುವತಿಯರು ಹಾಗೂ ಮದುವೆಯಾದ ಮಹಿಳೆಯರು ಸೇರಿ ಒಟ್ಟು 150 ನಾಪತ್ತೆ ಪ್ರಕರಣಗಳ ದಾಖಲಾಗಿದ್ದು, ಅವುಗಳ ಪೈಕಿ 135 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 18 ವರ್ಷಕ್ಕಿಂತ ಮಿಕ್ಕಿ ಪ್ರಾಯದ ಯುವತಿಯರು ಹಾಗೂ ಮಹಿಳೆಯರ ಇನ್ನೂ 14 ಪ್ರಕರಣಗಳು ಬಾಕಿಯಿದ್ದು, ಕಾಣೆಯಾಗಿದ್ದ 3 ಅಪ್ರಾಪ್ತ ಮಕ್ಕಳ ಪೈಕಿ 1 ಪ್ರಕರಣ ಕೂಡಾ ಪತ್ತೆಯಾಗಲು ಬಾಕಿಯಿದೆ. ಈ ನಾಪತ್ತೆ ಪ್ರಕರಣಗಳ ಹಿಂದೆ ಲವ್ ಜಿಹಾದ್ ಕೈವಾಡದ ಬಗ್ಗೆಯೂ ಪ್ರಶ್ನೆ ಎದ್ದಿತ್ತಾದರೂ ಜಿಲ್ಲೆಯಲ್ಲಿ ಪ್ರೀತಿ-ಪ್ರೇಮ-ಮೋಸ ಪ್ರಕರಣಗಳ ಹೊರತು ಲವ್ ಜಿಹಾದ್ ಕಡಿಮೆ ಅನ್ನೋ ಅಭಿಪ್ರಾಯವಿದೆ. 

ಇತ್ತೀಚೆಗೆ ಪ್ರಕರಣ ದಾಖಲಾದ ಕೂಡಲೇ ಯಾವುದೇ ಸಮಯ ವ್ಯರ್ಥ ಮಾಡದೆ ಕೂಡಲೇ ಪತ್ತೆ ಹಚ್ಚಲು ಕ್ರಮ‌ ಕೈಗೊಳ್ತೇವೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸಣ್ಣ ಪ್ರಾಯದ ಮಕ್ಕಳ ವಿಚಾರವನ್ನು ವಿಶೇಷ ಸೆಕ್ಷನ್‌ಗಳಡಿ ಪರಿಗಣಿಸಲಾಗುತ್ತದೆ. ಅಲ್ಲದೇ, ಈ ಸಂಬಂಧ ವಿಶೇಷ ಡ್ರೈವ್ ಕೂಡಾ ನಡೆಸಲು ಆದೇಶ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ದಾಖಲಾಗಿರುವ ಪ್ರಕ್ರಿಯೆಗಳ ಜತೆ ಈ ಹಿಂದಿನ ಪ್ರಕರಣಗಳನ್ನು ಕೂಡಾ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಏನು ಮಾಡ್ತಿದ್ದಾರೆ ಅಂತಾ ನೋಡೋಕೆ ಪೋಷಕರು ಈ ಬಗ್ಗೆ ಹೆಚ್ಚಿ‌ನ ನಿಗಾ ಇರಿಸಬೇಕು. ಮಕ್ಕಳು ಸಾಮಾಜಿಕ ಜಾಲತಾಣದ ಬಳಕೆ, ಅವರು ಏನು ನೋಡ್ತಿದ್ದಾರೆ, ಅನಾಮಿಕ ವ್ಯಕ್ತಿಗಳ ಜತೆ ಸಂಪರ್ಕ ಮಾಡ್ತಿದ್ದಾರಾ..ಅವರ ಸ್ವಭಾವದಲ್ಲಿ ಬದಲಾವಣೆಯಾಗಿದ್ಯಾ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರೀತಿ- ಪ್ರೇಮ ಅಂತಾ ಮಕ್ಕಳು, ಯುವಕ- ಯುವತಿಯರು ದಾರಿ ತಪ್ತಿದ್ದಾರೆ ಹೊರತು ಲವ್ ಜಿಹಾದ್ ಅನ್ನೋ ವಿಚಾರ ಜಿಲ್ಲೆಯಲ್ಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮಾನಾ ಪೆನ್ನೇಕರ್ ಹೇಳಿದ್ದಾರೆ.