
ಹೆಂಡತಿ ಕಾಟಕ್ಕೆ 'ಲೈವ್' ಸೂಸೈಡ್ ಯತ್ನ: ಗಂಡನ ನೌಟಂಕಿ ನಾಟಕ ಬಿಚ್ಚಿಟ್ಟ ಕುವೈತ್ ರಿಟರ್ನ್ ಪತ್ನಿ!
ಕುವೈತ್‌ನಿಂದ ಮರಳಿದ ಪತಿಗೆ ಪತ್ನಿ ಮನೆಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ನೊಂದ ಪತಿ ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದು ಹಣಕ್ಕಾಗಿ ಗಂಡ ಆಡಿದ ನಾಟಕ ಮತ್ತು ಆತನೇ ಅನೈತಿಕ ಸಂಬಂಧದ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
ಬೆಂಗಳೂರು (ಅ.10): ಕೌಟುಂಬಿಕ ಕಲಹದ ಪ್ರಕರಣವೊಂದು ಇದೀಗ ವಿಚಿತ್ರ ತಿರುವು ಪಡೆದುಕೊಂಡಿದ್ದು, ಗಂಡನೊಬ್ಬ ಹೆಂಡತಿಯ ಕಿರುಕುಳದಿಂದ ಬೇಸತ್ತು ಫೇಸ್‌ಬುಕ್‌ನಲ್ಲಿ ಲೈವ್ ಆತ್ಮಹತ್ಯೆ ಯತ್ನ ನಡೆಸಿದರೆ, ಪತ್ನಿಯು ಇದಕ್ಕೆ ತಿರುಗೇಟು ನೀಡಿ, ಇದು ಕೇವಲ ಹಣಕ್ಕಾಗಿ ಮತ್ತು ಅನೈತಿಕ ಸಂಬಂಧದ ಸುಳ್ಳು ಕಥೆ ಕಟ್ಟಿ ಪೀಡಿಸುತ್ತಿರುವ ಗಂಡನ 'ನೌಟಂಕಿ ಆಟ' ಎಂದು ಆರೋಪಿಸಿರುವುದು ಬೆಳಕಿಗೆ ಬಂದಿದೆ. ಈ ಗಲಾಟೆ ಸಂಸಾರದ ಕಂಪ್ಲೀಟ್ ಕಥೆ ಇದೀಗ ಬೀದಿಗೆ ಬಂದಿದೆ.
ವಿದೇಶದಿಂದ ವಾಪಸ್ ಬಂದ ಗಂಡನಿಗೆ ಎದುರಾದ ಕಹಿ ಸತ್ಯ:
ಅತ್ಯಂತ ಬಡ ಕುಟುಂಬದ ಯುವಕ ಪಾಷಾ, ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಹೆಂಡತಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗಲೇ ಆಟೋ ಓಡಿಸುವುದನ್ನು ಬಿಟ್ಟು ಎರಡು ವರ್ಷಗಳ ಹಿಂದೆ ಕುವೈತ್‌ಗೆ ದುಡಿಯಲು ತೆರಳಿದ್ದ. ವಿದೇಶಕ್ಕೆ ಹೋದ ಮೇಲೆ ಈತ ತನ್ನ ಪತ್ನಿಗೆ ಸರಿಯಾಗಿ ಕರೆ ಮಾಡಲಿಲ್ಲ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ಆಕೆಯನ್ನು ತವರು ಮನೆಯಲ್ಲಿ ಬಿಟ್ಟಿದ್ದ ಎಂಬ ಗಂಭೀರ ಆರೋಪ ಪತ್ನಿಯದ್ದಾಗಿದೆ. ಎರಡು ವರ್ಷಗಳ ನಂತರ ದುಡಿದು ವಾಪಸ್ ಬಂದ ಪಾಷಾಗೆ, ಹೆಂಡತಿ ತವರು ಮನೆ ಸೇರಿರುವುದು ಗೊತ್ತಾಗಿದೆ. ಆತ ಎಷ್ಟೇ ಕ ಕರೆದರೂ ಆಕೆ ಮನೆಗೆ ಬರಲು ಒಪ್ಪಿಲ್ಲ. ಗಂಡ ಪಾಷಾ ಮನೆಗೆ ಬಾ ಎಂದರೆ, ಪತ್ನಿಯ ಉತ್ತರ 'ನೋ ವೇ' ಎಂದಾಗಿತ್ತು. ಅಂತಿಮವಾಗಿ ವಿಚ್ಛೇದನ ಕೇಳಿದರೆ, ಆಕೆ ತನಗೆ ಬರಬೇಕಾದ ಹಣ ಮತ್ತು ಜೀವನ ನಿರ್ವಹಣೆಗಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ಕೇಳುತ್ತಿದ್ದಳು ಎನ್ನಲಾಗಿದೆ.
ಅನೈತಿಕ ಸಂಬಂಧದ' ಸುಳ್ಳು ಕಥೆ:
ಪತ್ನಿ ಡಿವೋರ್ಸ್‌ಗೆ ಹಣ ಕೇಳಿದ್ದರಿಂದ ಕೋಪಗೊಂಡ ಗಂಡ ಪಾಷಾ ಒಂದು ಹೊಸ ಕಥೆಯನ್ನು ಕಟ್ಟಲು ಶುರುಮಾಡಿದ. ತನ್ನ ಪತ್ನಿಯು ಮತ್ತೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಇದೇ ಕಾರಣಕ್ಕೆ ಆಕೆ ನನ್ನೊಂದಿಗೆ ಬರುತ್ತಿಲ್ಲ ಮತ್ತು ಹಣಕ್ಕಾಗಿ ಪೀಡಿಸುತ್ತಿದ್ದಾಳೆ ಎಂದು ಆರೋಪಿಸಿ ಬಂಧುಗಳು ಮತ್ತು ಸಾರ್ವಜನಿಕರ ಮುಂದೆ ಪತ್ನಿಯ ಚಾರಿತ್ರ್ಯ ವಧೆ ಮಾಡಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲ, ಪಾಷಾ ತಾಯಿಯೂ ಸಹ ಸೊಸೆಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ಲೈವ್ ಸೂಸೈಡ್ ಯತ್ನದ ನಾಟಕ:
ಪತ್ನಿಯ ಮೇಲೆ ಸಾರ್ವಜನಿಕ ಸಹಾನುಭೂತಿ ಕಳೆದುಕೊಳ್ಳುವಂತೆ ಮಾಡಲು ಹಾಗೂ ಡಿವೋರ್ಸ್ ಪ್ರಕರಣದಲ್ಲಿ ಅನುಕೂಲ ಮಾಡಿಕೊಳ್ಳಲು ಗಂಡ ಪಾಷಾ ಒಂದು ನಾಟಕವಾಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಇತ್ತೀಚೆಗೆ ಈತ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಮತ್ತು ಹೆಂಡತಿಯ ಟಾರ್ಚರ್ ನಿಂದ ಬೇಸತ್ತು ವಿಷ ಕುಡಿಯುವ ನಾಟಕವಾಡಿದ್ದಾನೆ. ಆದರೆ, ಇದು ಕೇವಲ ಗಂಡನ ನೌಟಂಕಿ ಆಟ ಎಂದು ಪತ್ನಿ ಬಿಚ್ಚಿಟ್ಟಿದ್ದಾಳೆ.
ಪತ್ನಿಯ ಪರ ಹೇಳಿಕೆ: ಕುವೈತ್‌ಗೆ ಹೋದ ಮೇಲೆ ನನಗೆ ಕಾಲ್ ಮಾಡಲಿಲ್ಲ. ನನ್ನ ಗರ್ಭಿಣಿ ಸ್ಥಿತಿಯಲ್ಲಿ ಬಿಟ್ಟು ಹೋಗಿಬಿಟ್ಟರು. ನಂತರ ನನ್ನ ತಾಯಿಯವರು ನನ್ನನ್ನು ಸರಿ ಇಲ್ಲ ಅಂದುಬಿಟ್ಟರು. ಇದೆಲ್ಲಾ ಆದ ಮೇಲೆ ಹೇಗೆ ಸಂಸಾರ ಮಾಡುವುದು? ಎಂದು ಪ್ರಶ್ನಿಸಿದ್ದಾಳೆ. ಇಲ್ಲಿ ಗಂಡನ ಅಥವಾ ಹೆಂಡತಿಯ ವಾದದಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬುದನ್ನು ನ್ಯಾಯಾಲಯ ತೀರ್ಮಾನಿಸಬೇಕಿದೆ. ಆದರೆ, ಈ ಗಂಡ-ಹೆಂಡತಿಯ ಜಗಳದಿಂದಾಗಿ ಅವರ ಇಬ್ಬರು ಮಕ್ಕಳ ಜೀವನವು ಹಾಳಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಒಂದು ಗಲಾಟೆ ಸಂಸಾರದ ಕಂಪ್ಲೀಟ್ ಕಥೆ ಇದೀಗ ಕಾನೂನಿನ ಅಂಗಳದಲ್ಲಿದೆ.