Asianet Suvarna News Asianet Suvarna News

ಬೆಂಗಳೂರು ರಸ್ತೆಗಿಳಿದ ಕ್ಯೂಟ್‌ ಟ್ಯಾಕ್ಸಿ, ಸಾರಿಗೆ ಇಲಾಖೆಯಿಂದಲೂ ಗ್ರೀನ್‌ ಸಿಗ್ನಲ್‌!

ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಹಳದಿ ಬಣ್ಣದ ಕ್ಯೂಟ್‌ ಟ್ಯಾಕ್ಸಿ ಸೇವೆಯು ಆರಂಭವಾಗಿದ್ದು, ಇದಕ್ಕೆ ಸಾರಿಗೆ ಇಲಾಖೆಯಿಂದಲೂ ಅನುಮತಿ ದೊರೆತಿದೆ.

ಬೆಂಗಳೂರು (ಏ.25): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಟ್ಯಾಕ್ಸಿ ಸೇವೆ ಕಲ್ಪಿಸುತ್ತಿರುವ ಓಲಾ, ಉಬರ್‌ ಟ್ಯಾಕ್ಸಿ ಸೇವೆಯ ಜೊತೆಗೆ ಮತ್ತೊಂದು ಹೊಸದಾದ ಹಳದಿ ಬಣ್ಣದ ಕ್ಯೂಟ್‌ ಟ್ಯಾಕ್ಸಿ ಸೇವೆಯು ಆರಂಭವಾಗಿದೆ. ಇದಕ್ಕೆ ಸಾರಿಗೆ ಇಲಾಖೆಯಿಂದಲೂ ಅನುಮತಿ ನಿಡಿದ್ದು, ದರವನ್ನೂ ಕೂಡ ನಿಗದಿ ಮಾಡಿದೆ.

ಸಾರಿಗೆ ಇಲಾಖೆ ಅನುಮತಿ ಮೇರೆಗೆ ಹಳದಿ ಟ್ಯಾಕ್ಸಿ ರಸ್ತೆಗಿಳಿಯುತ್ತಿದೆ. ಸಾರಿಗೆ ಇಲಾಖೆಯು ಓಲಾ, ಊಬರ್ ನಂತೆ ಪ್ರತ್ಯೇಕ ಪ್ರಯಾಣ ದರ ‌ನಿಗದಿ ಮಾಡಿದೆ. ಪ್ರತಿ 1 ಕಿಲೋಮೀಟರ್ ಗೆ 16 ರೂ. ದರವನ್ನು ನಿಗದಿ ಮಾಡಲಾಗಿದೆ. ಇನ್ನು 4  ಕಿಲೋ ಮೀಟರ್‌ವರೆಗೆ ರೂ. 60 ರಷ್ಟು ಕನಿಷ್ಠ ದರ ನಿಗದಿ ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಕೇವಲ ಮೂರ್ನಾಲ್ಕು ಕಿಲೋಮೀಟರ್‌ ಪ್ರಯಾಣದ ಸೇವೆಗೆ ನೂರಾರು ರೂ. ವಸೂಲಿ ಮಾಡುವ ಟ್ಯಾಕ್ಸಿಗಳಿಗೆ ಹೋಲಿಕೆ ಮಾಡಿದಲ್ಲಿ ಈ ಹೊಸ ಟ್ಯಾಕ್ಸಿಯ ದರ ಅತ್ಯಂತ ಕಡಿಮೆಯಾಗಿದೆ. ಇದನ್ನು ಪ್ರಯಾಣಿಕರ ಸ್ನೇಹಿ ಎಂದು ಹೇಳಲಾಗುತ್ತಿದೆ.

ಬಜಾಬ್‌ ಕಂಪನಿಯ ವಾಹನ: ನಾಲ್ಕು ಚಕ್ರದ ವಾಹನಗಳು ಮೀಟರ್ ಆಳವಡಿಕೆಯೊಂದಿಗೆ ರಸ್ತೆಗೆ ಇಳಿಯುತ್ತಿದೆ. ಬಜಾಬ್‌ ಕಂಪನಿಯ ಕ್ಯೂಟ್‌ (ಕ್ವಾಡ್ರಿ ಸೈಕಲ್‌) ವಾಹನಗಳು ನಗರದಲ್ಲಿ ಸೇವೆಯನ್ನು ಆರಂಭಿಸಲಿವೆ. ಕಾರು ಮಾದರಿಯ ಬಜಾಬ್‌ ಕ್ಯೂಟ್  ಕ್ವಾಡ್ರಿ ಸೈಕಲ್ ವಾಹನವು 2019 ರಲ್ಲೇ ಮಾರುಕಟ್ಟೆಗೆ ಬಂದಿದೆ. ಆದರೆ, ಹಲವು ವರ್ಷದಿಂದ ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಸೇವೆಯನ್ನು ನೀಡಲು ಸಾರಿಗೆ ಇಲಾಖೆ ಅನುಮತಿ ನೀಡಿರಲಿಲ್ಲ. ಇದೀಗ ದರ ನಿಗದಿಪಡಿಸಿ ಸಾರ್ವಜನಿಕ ಸೇವೆಗೆ ಅನುಮತಿಯನ್ನು ನೀಡಿದೆ. ಆದ್ದರಿಂದ ಇಂದಿನಿಂದ ಕ್ಯೂಟ್‌ ಟ್ಯಾಕ್ಸಿ ಸಾರ್ವಜನಿಕರ ಸೇವೆಗೆ ಸಜ್ಜಾಗಿ ಆಗಮಿಸಿವೆ.

Video Top Stories