ನಾಟಕಗಳು ಶುರು ಮಾಡಿದ್ರೂ ನೋಡಲು ಬರುತ್ತಿಲ್ಲ ಜನರು, ಕಂಪನಿಗಳು ಕಂಗಾಲು!
- ಅಳಿವಿನ ಅಂಚಿನತ್ತ ಸಾಗಿದೆ ವೃತ್ತಿರಂಗಭೂಮಿ
- ಕೊರೋನಾ ಇಳಿಕೆಯಾದರೂ ನಾಟಕ ಕಂಪನಿಗಳು ಕಂಗಾಲು!
- ಊಟ, ವಸತಿ ಹಾಗೂ ಸಂಬಳ ನೀಡಲೂ ಹಣವಿಲ್ಲದ ದುಸ್ಥಿತಿ
ಬೆಂಗಳೂರು (ನ. 19): ಇಂದಿನ ಆಧುನಿಕ ಯುಗದಲ್ಲಿ ಮೊದಲೇ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದ ನಾಟಕ ಕಂಪನಿಗಳು, ಕೊರೋನಾ ಬಂದ ಬಳಿಕ ನಾಟಕಗಳ ಪ್ರದರ್ಶನವೇ ಇಲ್ಲದಂತೆ ಆಗಿತ್ತು. ಇದೀಗ ನಾಟಕಗಳ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಇನ್ನಾದರೂ ನಮ್ಮ ಬದಕು ಸರಿಹೋಗುತ್ತೆ ಎಂದು ತಿಳಿದಿದ್ದ ನಾಟಕ ಕಂಪನಿಗಳ ಮಾಲೀಕರು ಮತ್ತು ಕಲಾವಿದರಿಗೆ ನಿರಾಸೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬಾರದೇ ನಾಟಕ ಕಂಪನಿ ಮಾಲೀಕರು ಮತ್ತು ಕಲಾವಿದರು ಪರದಾಡುವಂತಹ ಸ್ಥಿತಿ ಮುಂದುವರಿದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಕಲಬುರಗಿ ಮುಖ್ಯರಸ್ತೆಗೆ ಹೊಂದಿಕೊ೦ಡಿರುವ ಅನ್ನದಾನಗೌಡ ಬಯ್ಯಾಪೂರ ಆಸ್ಪತ್ರೆ ಮುಂಭಾಗದಲ್ಲಿ ನಾಟ್ಯ ಸಂಘವೊ೦ದು ಠಿಕಾಣಿ ಹೂಡಿದ್ದು ಹವ್ಯಾಸಿ, ಸಾಂಸಾರಿಕ ಹಾಗೂ ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿಯವರಾದ ರಾಜಣ್ಣ ರಂಗಭೂಮಿಕಲಾವಿದರು. ನಾಟಕ ಸಾಹಿತ್ಯ ಬರೆಯುತ್ತ ನಿರ್ದೇಶನ ಮಾಡುತ್ತ ರಂಗಭೂಮಿಯಲ್ಲೇ ಬದುಕು ಕಟ್ಟಿಕೊಂಡವರು. ಸದ್ಯ ರಾಜಣ್ಣ ಜೇವರ್ಗಿಯವರ ಇಡೀ ಕುಟುಂಬವೇ ರಂಗಭೂಮಿ ಕಲೆಗೆ ಜೀವನ ಮುಡಿಪಾಗಿಟ್ಟಿದೆ. ಒಟ್ಟಿನಲ್ಲಿ ಕೊರೊನಾ ಬಳಿಕ ಕಲಾವಿದರೂ ನಾಟಕಗಳು ಶುರು ಮಾಡಿದ್ದಾರೆ. ಆದ್ರೆ ಜನರು ಮಾತ್ರ ನಾಟಕ ಕಂಪನಿಗಳ ಕಡೆಗೆ ಮುಖ ಮಾಡುತ್ತಿಲ್ಲ. ಅತ್ತ ಪ್ರೇಕ್ಷಕರು ಇಲ್ಲದೆ ಇತ್ತ ಸರ್ಕಾರದ ಸಹಾಯವೂ ಇಲ್ಲದೆ ನಾಟಕ ಕಂಪನಿಗಳು ಹಾಗೂ ರಂಗಭೂಮಿ ಕಲಾವಿದರೂ ಕಂಗಾಲಾಗಿದ್ದಾರೆ. ಹೀಗಾಗಿ ಇನ್ನಾದ್ರೂ ಸರ್ಕಾರಗಳು ರಂಗಭೂಮಿ ಉಳಿವಿಗೆ ಮುಂದಾಗಬೇಕಿದೆ..