Bagalkot: ಬಾದಾಮಿ ಬನಶಂಕರಿ ಜಾತ್ರೆ ರದ್ದು: ಕಂಗಾಲಾದ ಕಲಾವಿದರು

*  ಕಲಾವಿದರ ಬದುಕು ಕಸಿದುಕೊಂಡ ಕೊರೋನಾವೈರಸ್
*  ರದ್ದಾದ ತಿಂಗಳ ಪರ್ಯಂತ ನಡೆಯೋ ಬಾದಾಮಿ ಜಾತ್ರೆ
*  ಅವಕಾಶ ಕೊಡಿ, ನಿಯಮ ಪಾಲಿಸಿ ನಾಟಕ ಪ್ರದರ್ಶನ ಮಾಡ್ತೇವೆ 
 

First Published Jan 13, 2022, 12:15 PM IST | Last Updated Jan 13, 2022, 12:15 PM IST

ಬಾಗಲಕೋಟೆ(ಜ.13):   ಪ್ರತಿ ವರ್ಷ ನೂರಾರು ಜನ ರಂಗಭೂಮಿ ಕಲಾವಿದರಿಗೆ ವರದಾನವಾಗಿದ್ದ ಐತಿಹಾಸಿಕ ಬಾದಾಮಿಯ ಬನಶಂಕರಿ ಜಾತ್ರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ರದ್ದಾಗಿದ್ದು, ಇದೀಗ ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದು ನಿಲ್ಲುವಂತಾಗಿದೆ. ಪ್ರತಿವರ್ಷ ಒಂದೂವರೆ ತಿಂಗಳ ಕಾಲ ದುಡಿದು ವರ್ಷವಿಡಿ ಬದುಕಿಗೆ ಆಸರೆಯಾಗುತ್ತಿದ್ದ ಬಾದಾಮಿ ಜಾತ್ರೆ ರದ್ದಾಗಿದ್ದರಿಂದ ಕಲಾವಿದರು ಕಂಗಾಲಾಗಿದ್ದಾರೆ. ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ ಅಂತ ಸುವರ್ಣನ್ಯೂಸ್ ಮೂಲಕ ಗೋಗರೆಯುತ್ತಿದ್ದಾರೆ. 

ಐತಿಹಾಸಿಕ ಬಾದಾಮಿ ಬನಶಂಕರಿ ದೇವಿ ಜಾತ್ರೆಯನ್ನು, ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ  ಈ ಬಾರಿಯೂ ಜಿಲ್ಲಾಡಳಿತ ರದ್ದು ಮಾಡಿದೆ. ಇದರೊಟ್ಟಿಗೆ ಜಾತ್ರೆಯಲ್ಲಿ ನಾಟಕ ಪ್ರದರ್ಶನವನ್ನೂ ಕೂಡಾ ನಿಷೇಧಿಸಿದೆ. ಹೀಗಾಗಿ ಪ್ರತಿವರ್ಷ 10 ರಿಂದ 15 ನಾಟಕ ಪ್ರದರ್ಶನದ ಮೂಲಕ ವರ್ಷವಿಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ನೂರಾರು ಜನ ಹವ್ಯಾಸಿ, ವೃತ್ತಿ ರಂಗಭೂಮಿ ಕಲಾವಿದರ ಬದುಕು ಈ ಬಾರಿ ಅಕ್ಷರಶ: ಬೀದಿಗೆ ಬರುವಂತಾಗಿದೆ. 

Raichur: ಶಿಕ್ಷಣ ಸಚಿವರೇ ಇತ್ತ ಒಮ್ಮೆ ತಿರುಗಿ ನೋಡಿ: 1053 ಮಕ್ಕಳಿಗೆ ಒಂದೇ ಶೌಚಾಲಯ..!

ಬಾಗಲಕೋಟೆ ಜಿಲ್ಲೆಯಲ್ಲಿಯೇ ಹವ್ಯಾಸಿ,ವೃತ್ತಿ ರಂಗಭೂಮಿ ಕಲಾವಿದರು ಸೇರಿ ಅಂದಾಜು 4,500 ಜನರಿದ್ದಾರೆ. ಬಾದಾಮಿಯ ಹಂಸನೂರು ಸೇರಿದಂತೆ ಗ್ರಾಮೀಣ ಭಾಗದ ಕಲಾವಿದರು ಹೆಚ್ಚು ಉತ್ತರ ಕರ್ನಾಟಕ ಭಾಗದಲ್ಲಿ ನಾಟಕ ಪ್ರದರ್ಶನಕ್ಕೆ ಹೋಗುತ್ತಿದ್ದು, ಇವರಿಗೆ ಕಲೆಯೇ ಜೀವನಾಧಾರ, ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಕಲಾವಿದರ ಪಾಲಿಗೆ ಅಕ್ಷರಶಃ ಕಣ್ಣೀರು ತರಿಸಿದೆ. ಕಳೆದ ಬಾರಿಯೂ ಕೆಲಸವಿಲ್ಲದೆ ಕಲಾವಿದರು ಅತಂತ್ರರಾಗಿದ್ದರು. ನಮಗೆ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ, ನಾವು ಕೋವಿಡ್ ನಿಯಮಾವಳಿಯಂತೆಯೇ ಪ್ರದರ್ಶನ ನೀಡುತ್ತೇವೆ. ನಮಗೆ ಬದುಕಲು ಅವಕಾಶ ಕೊಡಿ ಅಂತ ಗೋಗರೆದಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಓಮಿಕ್ರಾನ್ ಹಾವಳಿ ಹಿನ್ನೆಲೆಯಲ್ಲಿ ಜಾತ್ರೆಗಳನ್ನ ರದ್ದುಪಡಿಸಿದಂತೆ ಇತ್ತ ಬಾದಾಮಿ ಜಾತ್ರೆ ಸಹ ರದ್ದಾಗಿದ್ದು, ಇವುಗಳ ಮಧ್ಯೆ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ ಅಂತ ಕಲಾವಿದರು ಗೋಗರೆಯುತ್ತಿದ್ದಾರೆ. ಇತ್ತ ಕೊರೊನಾ ನಿಯಮಾವಳಿ ಪಾಲನೆ ಜೊತೆಗೆ ಜಿಲ್ಲಾಡಳಿತ ಕಲೆ ,ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡುತ್ತಾ ಅಂತ ಕಾದು ನೋಡಬೇಕಿದೆ.