Asianet Suvarna News Asianet Suvarna News

ಫ್ರೀ ಬಸ್ ಎಫೆಕ್ಟ್..ಪ್ರವಾಸಿ ತಾಣಗಳು ಫುಲ್ ರಶ್: ಸ್ಥಳೀಯರು, ಶಾಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸಂಕಷ್ಟ

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣದ ಭಾಗ್ಯ ಸಿಕ್ಕಿದೆ. ಇದ್ರಿಂದಾಗಿ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಬಿಗ್ ಬೂಸ್ಟ್ ಸಿಕ್ಕಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರೋದು ಸ್ಥಳೀಯರ ಪ್ರಯಾಣಕ್ಕೆ ಅಡಚಣೆ ಉಂಟು ಮಾಡ್ತಿದೆ. 
 

ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯೂ ಒಂದು. ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಸರ್ಕಾರ ಶಕ್ತಿ ಯೋಜನೆಯನ್ನ ಯಶಸ್ವಿಯಾಗಿ ಜಾರಿಗೊಳಿಸಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಅದ್ರಲ್ಲೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು ಹೆಚ್ಚಿರುವ ಉತ್ತರ ಕನ್ನಡದಲ್ಲೂ ಸಹಜವಾಗೇ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ. ಈ ಮೊದಲು ಉತ್ತರ ಕನ್ನಡದಲ್ಲಿ ಪ್ರತಿನಿತ್ಯ 1 ಲಕ್ಷದ 50 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದ್ರೆ ಶಕ್ತಿ ಯೋಜನೆ ಅನುಷ್ಠಾನದ ಬಳಿಕ 2 ಲಕ್ಷದ 35 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಪ್ರವಾಸೋದ್ಯಮ ಚೇತರಿಸಿಕೊಳ್ತಿದೆ. ಆದ್ರೆ ಬಸ್‌ಗಳು ಫುಲ್ ರಶ್ ಆಗ್ತಿದ್ದು, ಸ್ಥಳೀಯರು ಹಾಗೂ ಶಾಲಾ ವಿದ್ಯಾರ್ಥಿಗಳು ಬಸ್ ಸಿಗದೇ ಪರದಾಡುವಂತಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರೋದ್ರಿಂದ 50 ಹೆಚ್ಚುವರಿ ಬಸ್ಗಳ ಅಗತ್ಯವಿದೆ. ಜೊತೆಗೆ ಚಾಲಕರು ಹಾಗೂ ನಿರ್ವಾಹಕರ ಕೊರತೆಯೂ ಎದುರಾಗಿದೆ. ಕೆಲ ಬಸ್ಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇದ್ರಿಂದಾಗಿ ಗ್ರಾಮೀಣ ಭಾಗಗಳಿಗೆ ತೆರಳುವ ಜನರಿಗೆ ಸಮಸ್ಯೆ ಉಂಟಾಗ್ತಿದೆ. ಶೀಘ್ರದಲ್ಲೇ 50 ಹೊಸ ಬಸ್ ಖರೀದಿಸಿ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸ್ತೇವೆ ಅಂತಾರೆ ಉತ್ತರಕನ್ನಡ ಜಿಲ್ಲೆ ವಾಯುವ್ಯ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ.ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಕ್ಷೇತ್ರ ಪ್ರಗತಿ ಕಂಡಿರೋದಂತು ಸತ್ಯ. ಆದ್ರೆ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗ್ತಿರೋದ್ರಿಂದ ಸ್ಥಳೀಯರಿಗೆ ಸ್ವಲ್ಪ ಅಡಚಣೆ ಉಂಟಾಗ್ತಿದ್ದು, ಸಾರಿಗೆ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.

ಇದನ್ನೂ ವೀಕ್ಷಿಸಿ:  ಈಡೇರದ ಬೃಹತ್ ಮಾರುಕಟ್ಟೆ ಭರವಸೆ, ಸಿಡಿದೆದ್ದ ರೈತರು: ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Video Top Stories