
'ಹೆಡಗೇವಾರ್‌ಗಿಂತ ಈ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ': ಸಿದ್ದರಾಮಯ್ಯ ವಾಗ್ದಾಳಿ
"ನಮ್ಮ ದೇಶ ಎಲ್ಲಿಗೆ ಹೋಗುತ್ತಿದ ಎಂದು ಊಹಿಸಿಕೊಳ್ಳಿ, ಹೆಡ್ಗೆವಾರ್‌ಗಿಂತ ಈ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ಬೆಂಗಳೂರು (ಮೇ 27): ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಇದೀಗ ಹಲವು ಮಜಲುಗಳನ್ನು ಪಡೆದುಕೊಂಡಿದೆ. ಪರಿಷ್ಕರಣೆ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸಂಸ್ಥಾಪಕ ಹೆಡಗೇವಾರ್ (K B Hedgewar) ಭಾಷಣವನ್ನು ಸೇರ್ಪಡೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) "ರೋಹಿತ್‌ನಂತ ವ್ಯಕ್ತಿ ಬಳಿ ಪಠ್ಯ ಪುಸ್ತಕ ರಚನೆ ಕೊಟ್ಟಿದ್ದಾರೆ, ಆತ ಪಠ್ಯಪುಸ್ತಕದಲ್ಲಿ ಏನಿರಬೇಕು ಎಂದು ತೀರ್ಮಾನ ಮಾಡುತ್ತಾನೆ, ನಮ್ಮ ದೇಶ ಎಲ್ಲಿಗೆ ಹೋಗುತ್ತಿದ ಎಂದು ಊಹಿಸಿಕೊಳ್ಳಿ, ಹೆಡ್ಗೆವಾರ್‌ಗಿಂತ ಈ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ" ಎಂದಿದ್ದಾರೆ.
ಇದನ್ನೂ ಓದಿ:ಭುಗಿಲೆದ್ದ ಪಠ್ಯ ಪರಿಷ್ಕರಣೆ ವಿವಾದ: ರಾಜ್ಯ ಸರ್ಕಾರಕ್ಕೆ ಗಡವು ನೀಡಿದ ನಾರಾಯಣ ಗೌಡ
"ಗತ್ ಸಿಂಗ್ ಪಠ್ಯ ತೆಗೆದು ಹೆಡಗೇವಾರ್ ಭಾಷಣ ಸೇರಿಸಿದ್ದಾರೆ, ಚರಿತ್ರೆ ಇಲ್ಲಿವರೆಗೆ ತಿರುಚಿದ್ದಾರೆ ಮತ್ತೆ ತಿರುಚುತ್ತಿದ್ದಾರೆ, ಬಿಜೆಪಿ ಬಂದಮೇಲೆ ಯಾವ ಚರಿತ್ರೆ ಓದಬೇಕು ತಿಳಿತಿಲ್ಲ" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇನ್ನು ಪಠ್ಯ ಪರಿಷ್ಕರಣೆ ಬಳಿಕ ಕೆಲವು ಲೇಖಕರಿಗೆ ಸಂಬಂಧಿಸಿದ ಗದ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ಸೇರ್ಪಡೆ ಮಾಡಿರುವುದರಿಂದ ಶಾಲಾ ಪಠ್ಯದಲ್ಲಿ ಕೇಸರೀಕರಣವಾಗಿದೆ ಎಂದು ಹಲವು ಸಂಘಟನೆಗಳು, ಎಡಪಂಥೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳು ದೂರುತ್ತಿವೆ.