Asianet Suvarna News Asianet Suvarna News

Hassan Mixi Blast: ನಿನ್ನೆ ಪತ್ನಿಗೆ ಅವಳಿ ಜವಳಿ ಮಕ್ಕಳಾಗಿದ್ದರೂ ಮುಖ ನೋಡಲಾಗಿಲ್ಲ: ಗಾಯಾಳು ಶಶಿ ಅಳಲು

ಮಿಕ್ಸಿ ಸ್ಪೋಟ ಪ್ರಕರಣದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದರೆ, ನನ್ನ ಪತ್ನಿಗೆ ನಿನ್ನೆ ಬೇರೊಂದು ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ಅವಳಿ ಜವಳಿ ಮಕ್ಕಳು ಜನಿಸಿವೆ. ನಾನು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಮಕ್ಕಳ ಮುಖ ನೋಡಲಾಗಿಲ್ಲ ಎಂದು ಗಾಯಾಳು ಶಶಿ ಅಳಲು ತೋಡಿಕೊಂಡಿದ್ದಾನೆ.

ಹಾಸನ (ಡಿ.28): ಕಳೆದ ಮೂರು ದಿನಗಳ ಹಿಂದೆ ಹಾಸನದಲ್ಲಿ ನಡೆದಿದ್ದ ಮಿಕ್ಸಿ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಕೋರಿಯರ್‌ ಮಳಿಗೆ ಮಾಲೀಕ ಶಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಕೈಗೆ ದೊಡ್ಡ ತೀವ್ರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ. ಆದರೆ, ತನ್ನ ಪತ್ನಿಗೆ ನಿನ್ನೆ ಹೆರಿಗೆ ಆಗಿದ್ದು, ಅವಳಿ ಜವಳಿ ಮಕ್ಕಳು ಜನಿಸಿವೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಮಕ್ಕಳ ಮುಖ ನೋಡಲಾಗಿಲ್ಲ ಎಂದು ಶಶಿ ಅಳಲು ತೋಡಿಕೊಂಡಿದ್ದಾನೆ.

ಹಾಸನ ನಗರದಲ್ಲಿ ಕೋರಿಯರ್‌ ಅಂಗಡಿಯೊಂದರಲ್ಲಿ ಡಿಸೆಂಬರ್ 26 ರಂದು ಮಿಕ್ಸಿ ಬ್ಲಾಸ್ಟ್‌ ಆಗಿತ್ತು. ಈ ಪ್ರಕರಣದ ಬಗ್ಗೆ ಮಾತನಾಡಿದ ಗಾಯಾಳು ಶಶಿ ಘಟನೆ ಬಗ್ಗೆ ಪೂರ್ಣ ವಿವರವನ್ನು ತಿಳಿಸಿದ್ದಾನೆ. ಬೆಂಗಳೂರಿನ ಪೀಣ್ಯದಿಂದ ಫ್ರಮ್ ಅಡ್ರೆಸ್ ಇಲ್ಲದೆ  ಕೊರಿಯರ್ ಬಂದಿತ್ತು. ಪಾರ್ಸೆಲ್ ಓಪನ್ ಮಾಡಿ ನಂತರ ನಮಗೆ ರಿಟರ್ನ್ ಮಾಡೋದಿಕ್ಕೆ ತಂದು ಕೊಟ್ಟರು. ಆಗ ಶಾಪ್‌ ಬಾಗಿಲು ಹಾಕಿ ಮನೆಗೆ ಹೋಗಬೇಕೆಂದುಕೊಂಡೆ. ಆಚೆ ಬರುವಾಗ ಟೇಬಲ್ ಮೇಲಿಂದ ಮಿಕ್ಸಿ ಕೆಳಗೆ ಬಿದ್ದು ಬ್ಲಾಸ್ಟ್ ಆಯಿತು ಎಂದು ಹೇಳಿದ್ದಾನೆ.

ಮಕ್ಕಳ ಮುಖ ನೋಡಲಾಗಿಲ್ಲ: ಡಿಸೆಂಬರ್ 17 ರಂದು ಬಂದಿತ್ತು. ಅದನ್ನು ಮಹಿಳೆಯ ಮನೆಗೂ ತಲುಪಿಸಲಾಗಿತ್ತು. ಆದರೆ, ಮಹಿಳೆ ವಸಂತಾ ಫ್ರಮ್‌ ವಿಳಾಸವಿಲ್ಲದ ಬಾಕ್ಸ್ ಅನ್ನು  26 ರ ಸಂಜೆ ರಿಟರ್ನ್ ಮಾಡಿದರು. ಜೊತೆಗೆ ಕೋರಿಯರ್‌ ವಾಪಸ್‌ ಕಳಿಸಲು 300 ರೂಪಾಯಿ ರಿಟರ್ನ್ ಚಾರ್ಚ್ ಕೇಳಿದರೂ ಕೊಡದೇ ಅದನ್ನು ಇಲ್ಲಿ ಬಿಟ್ಟು ಹೋದರು.  ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ನನ್ನ ಜೀವಕ್ಕೆ ಅಪಾಯ ಆಗುತ್ತಿತ್ತು. ಈಗ ನನ್ನ ಜೀವನ ಹಾಳಾಯಿತು. ನನ್ನ ಪತ್ನಿಗೆ ನಿನ್ನೆ ಹೆರಿಗೆ ಆಗಿದೆ, ಅವಳಿ ಜವಳಿ ಮಕ್ಕಳು ಜನಿಸಿವೆ. ಮಕ್ಕಳ ಮುಖ ನೋಡಲಾಗಿಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಗಾಯಾಳು ಶಶಿ ನೋವು ತೋಡಿಕೊಂಡಿದ್ದಾನೆ.