Asianet Suvarna News Asianet Suvarna News

Kolar: ಕೊರೋನಾ ವಾರಿಯರ್ಸ್‌ ಗೋಳು ಕೇಳೋರಿಲ್ಲ, ಸಂಬಳ ಕೊಡೋರಿಲ್ಲ!

*ಸಂಕಟ ಬಂದಾಗ ಇವರು ಬೇಕು,  ಸಂಬಳ ಕೊಡಲು ಸತಾಯಿಸ್ತಾರೆ!
*ಗುತ್ತಿಗೆ ಆಧಾರ ನೌಕರರ ಗೋಳು ಕೇಳೋರಿಲ್ಲ, ಸಂಬಳ ಕೊಡೋರಿಲ್ಲ!
*ಕೋವಿಡ್‌ ವೇಳೆ ಪುಗಸಟ್ಟೆ ಕೆಲಸ ಮಾಡಿಸಿದ ಅಧಿಕಾರಿಗಳು!
*6 ತಿಂಗಳಿನಿಂದ ಸಂಬಳ ಸಿಗದೇ ಸಂಕಷ್ಟದಲ್ಲಿರುವ ನೌಕರರು
*ಸಂಬಳಕ್ಕಾಗಿ ಗೋಗರೆಯುತ್ತಿರುವ ಗುತ್ತಿಗೆ ಆಧಾರ ನೌಕರರು 

ಕೋಲಾರ (ಫೆ. 24): ಒಂದು ಕಡೆ ಪಿಪಿಇ ಕಿಟ್ ಧರಿಸಿ ಕೆಲಸ ಮಾಡ್ತಿರುವ ನೌಕರರು. ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡಿದಕ್ಕೆ ಕೈಗೆ ಚಿಪ್ಪು ಕೊಟ್ಟಿರುವ ಅಧಿಕಾರಿಗಳು. ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ನೌಕರರು. ಅಂದಹಾಗೆ ಇವೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿಯ ಮುಂದೆ. ಈಗ ಸಂಬಳಕ್ಕಾಗಿ ಗೋಗರೆಯುತ್ತಿರುವ ಇವರೆಲ್ಲಾ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿರುವ ನೌಕರರು. 

ರಾಜ್ಯದಲ್ಲಿ ಕೋವಿಡ್ ನ ತುರ್ತು ಪರಿಸ್ಥಿತಿ ಎದುರಾದಾಗ, ಖುದ್ದು ಸೋಂಕಿತರ ಕುಟುಂಬಸ್ಥರೇ ದೂರ ಉಳಿದ ವೇಳೆ ಇವರೆಲ್ಲಾ ಪ್ರಾಣದ ಹಂಗು ತೊರೆದು, ಅದೆಷ್ಟೋ ಬಾರಿ ಇವರಿಗೆ ಪಾಸಿಟಿವ್ ಬಂದರೂ ಸಹ ಕೆಲಸ ಮಾಡಿದ್ದಾರೆ. ಕೆಲವರು ದಿನದ 24  ಗಂಟೆಗೂ ಪಿಪಿಇ ಕಿಟ್ ಧರಿಸಿ ಕೆಲಸ ಮಾಡಿದ್ರೆ ,ಇನ್ನು ಕೆಲವರು ಸ್ವಚ್ಚತೆ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. 

ಇದನ್ನೂ ಓದಿKolar: 5 ಎಕರೆ ಜಮೀನಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣು ನಾಶ ಮಾಡಿದ ದುಷ್ಕರ್ಮಿಗಳು: ಕಂಗಾಲಾದ ರೈತ

ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳು ಕೊರತೆ ಉಂಟಾದಾಗ ಗುತ್ತಿಗೆ ಆಧಾರದಲ್ಲಿ ನೇಮವಾಗಿರುವ ಇವರಿಗೆ ತಿಂಗಳಿಗೆ 20 ಸಾವಿರ ಸಂಬಳ ನಿಗದಿ ಸಹ ಮಾಡಿದ್ರು, ಆರಂಭದ 6 ತಿಂಗಳು ಸರಿಯಾಗಿ ಸಂಬಳ ಏನೋ ಬಂದಿದೆ.  ಆದ್ರೆ ಬಳಿಕ ಮನಸ್ಸಿಗೆ ಬಂದಾಗ ಸಂಬಳ ನೀಡಿದ್ದಾರೆ. ಹೇಗೋ ತಡವಾದ್ರೂ ಸಂಬಳ ಕೊಡ್ತಾರಲ್ಲ ಬಿಡು ಅಂತ ಇದ್ರೆ ಇದೀಗ ಕಳೆದ 6 ತಿಂಗಳಿನಿಂದ ಸಂಬಳ ಕೊಡೋದನ್ನೇ ನಿಲ್ಲಿಸಿದ್ದಾರೆ. ಈಗಾಗಿ ಇವರೆಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ. ಇಲ್ಲಿದೆ ಈ ಕುರಿತ ಒಂದು ವರದಿ.

Video Top Stories