ದೇವೇಗೌಡರ ಪ್ರೀತಿಗೆ ಕರಗಿದ ಜಿಟಿಡಿ: ಹೆಚ್‌ಡಿಕೆ ಸಂಧಾನಕ್ಕೆ ಬಗ್ಗದವರು ದೊಡ್ಡಗೌಡ್ರಿಗೆ ಶರಣು
ಶಾಸಕ ಜಿ.ಟಿ ದೇವೇಗೌಡ ಜೆಡಿಎಸ್ ಬಿಡಲಿದ್ದಾರೆ ಎಂಬ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಿದ್ದು, ಜಿಟಿಡಿ ಮನವೊಲಿಸಲು ಹೆಚ್.ಡಿ ದೇವೇಗೌಡರು ಯಶಸ್ವಿಯಾಗಿದ್ದಾರೆ. ಹೆಚ್‌ಡಿಕೆ ಸಂಧಾನಕ್ಕೆ ಬಗ್ಗದ ಜಿಟಿಡಿ, ದೇವೇಗೌಡರಿಗೆ ಶರಣಾಗಿದ್ದಾರೆ.
ಜೆಡಿಎಸ್ ಬಿಟ್ಟವರು, ಬಿಡಲು ತುದಿಗಾಲಲ್ಲಿ ನಿಂತವರ ದೊಡ್ಡ ಲಿಸ್ಟೇ ಇದೆ. ಆದರೆ ಯಾರೇ ಪಕ್ಷ ಬಿಟ್ರೂ, ಕ್ಯಾರೇ ಅನ್ನದ ದೇವೇಗೌಡ್ರು, ಜಿಟಿಡಿ ಮನೆಗೆ ಹೋಗಿ ಮನವೊಲಿಸಿದ್ದಾರೆ. ಇದಕ್ಕೆ ಮೈಸೂರು ಭಾಗದಲ್ಲಿ ಅದರಲ್ಲಿಯೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿಗೆ ಇರುವ ಪ್ರಾಬಲ್ಯ ಕಾರಣವಾಗಿದೆ. ಈ ಮೂಲಕ ಸಿದ್ದರಾಮಯ್ಯಗೆ, ದೇವೇಗೌಡರು ಪೆಟ್ಟು ಕೊಟ್ಟಿದ್ದಾರೆ. ಹಾಗೂ ಶಾಸಕ ಜಿಟಿ ದೇವೇಗೌಡ ಮತ್ತು ತಮ್ಮ ಪುತ್ರ ಕುಮಾರಸ್ವಾಮಿ ನಡುವಿನ ವಿರಸವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ.