Mandya: ರಂಗನತಿಟ್ಟಿನಲ್ಲಿ ಪಕ್ಷಿಗಳ ಜತೆ ಪ್ರವಾಸಿಗರ ಕಲರವ.!
* ಕೂಲ್ ಕೂಲ್ ವಾತಾವರಣದಲ್ಲಿ ದೋಣಿ ವಿಹಾರ ಮಾಡಿ ಮಸ್ತ್ ಮಜಾ
* ಸಂತಾನೋತ್ಪತ್ತಿಗಾಗಿ ಬಂದಿರೊ ಬಾನಾಲಿಗಳ ವೀಕ್ಷಣೆಗೆ ಜನರ ದಂಡು
* ರಂಗನತಿಟ್ಟಿನಲ್ಲಿ ಸುಮಾರು 170 ಬಗೆಯ ಸಾವಿರಾರು ಪಕ್ಷಿಗಳು
ಮಂಡ್ಯ(ಮಾ.18): ಆಗಸದಲ್ಲಿ ಹಾರುವ ಒಂದು ಪಕ್ಷಿ ನೋಡಿದ್ರೆ ಸಾಕು ಏನೋ ಖುಷಿ. ಸಾವಿರಾರು ಬಾನಾಲಿಗಳನ್ನ ಒಂದೇ ಸ್ಥಳದಲ್ಲಿ ನೋಡೋದಕ್ಕೆ ಸಿಗುತ್ತೆ ಅಂದ್ರೆ ಇನ್ನೆಷ್ಟು ಸಂತಸ ಆಗೋದಿಲ್ಲ. ಅದ್ರಲೂ ಸುಡು ಬೇಸಿಗೆಯಲ್ಲೂ ಕೂಲ್ ಕೂಲ್ ವಾತಾವರಣದಿಂದ ಕೂಡಿದ ಪ್ರಾಕೃತಿಕ ತಾಣ ಅಂದ್ರೆ ಸ್ವರ್ಗವೇ ಧರೆಗಳಿದಂತಿದೆ.
ನೀರಿನ ಮಧ್ಯೆ ಬಣ್ಣ-ಬಣ್ಣದ ಪಕ್ಷಿಗಳ ಕಲರವ, ಗೂಡು ನಿರ್ಮಾಣದಲ್ಲಿ ತೊಡಗಿರುವ ಕೊಕ್ಕರೆಗಳು, ಮತ್ತೊಂದೆಡೆ ಮರಿಗಳನ್ನು ಸಂರಕ್ಷಣೆ ಮಾಡುತ್ತಿರುವ ತಾಯಿ ಪಕ್ಷಿ. ಈ ಮಧ್ಯೆ ಭಯ ಹುಟ್ಟಿಸುವ ಮೊಸಳೆಗಳು, ನೀರಿನಲ್ಲಿ ಮುಳುಗೇಳುತ್ತಿರುವ ನೀರು ನಾಯಿ. ಈ ದೃಶ್ಯ ಕಾಣಲು ಸಿಗುವುದು ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿ ಕಾಶಿ ವೀಕ್ಷಣೆ ಮಾಡೋದಕ್ಕೆ ಸಾವಿರಾರು ಪ್ರವಾಸಿಗರ ದಂಡು ಹರಿದು ಬರ್ತಿದೆ.
Uttara Kannada: ಶಿರಸಿಯಲ್ಲಿ ಸಂಭ್ರಮದ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವ
ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶ-ವಿದೇಶದಿಂದ ಸಂತಾನೋತ್ಪತ್ತಿಗಾಗಿ ಪಕ್ಷಿಗಳು ವಲಸೆ ಬರುತ್ತವೆ. ಹೀಗಾಗಿ ಈ ಆರು ತಿಂಗಳ ಕಾಲ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರಕೃತಿ ದೇವತೆಯೇ ಧರಗೆ ಇಳಿದು ಬಂದ ಹಾಗೆ ಭಾವಿಸುತ್ತದೆ. ಪೆಲಿಕಾನ್, ಓಪನ್ ಬಿಲ್ ಸ್ಟಾರ್ಕ್, ಸ್ಫೂನ್ ಬಿಲ್, ಕಾರ್ಮಾರೆಂಟ್, ಐಬಿಸ್, ಇಗ್‌ರೀಟ್, ಕಿಂಗ್ ಫಿಶರ್, ಪೆಂಟೆಂಡ್ ಸ್ಟಾಕ್ ಸೇರಿದಂತೆ 170 ಬಗೆಯ ಸಾವಿರಾರು ಪಕ್ಷಿಗಳು ರಂಗತಿಟ್ಟಿನ 25 ನಡುಗಡ್ಡೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತಿವೆ. ಇದಲ್ಲದೇ 100ಕ್ಕೂ ಹೆಚ್ಚು ಮೊಸಳೆಗಳು ಸಹ ವಾಸವಾಗಿದ್ದು, ಅಲ್ಲಲ್ಲಿ ಅಪರೂಪದ ಪ್ರಾಣಿಯಾದ ನೀರು ನಾಯಿ ತುಂಟಾಟ ನೋಡುಗರಿಗೆ ಮುದನೀಡುತ್ತವೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಹರಿದು ಬರುತ್ತಿದ್ದಾರೆ.
ಕೊರೋನಾದಿಂದಾಗಿ ರಂಗನತಿಟ್ಟಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಇದೀಗ ಪ್ರವಾಸಿರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ನಿತ್ಯ ಒಂದು ಸಾವಿರ ಜನರು ಭೇಟಿ ನೀಡುತ್ತಾರೆ. ಇಲ್ಲಿಗೆ ಬರುವ ಬಹುತೇಕರು ಬೋಟಿಂಗ್ ಮೂಲಕ ಪಕ್ಷಿ ಸೌಂದರ್ಯದ ಜತೆಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ, ಪಕ್ಷಿಗಳ ಫೋಟೋ ತೆಗೆಯುವ ಜತೆ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ಒಟ್ಟಾರೆ ಒಂದು ಕಡೆ ರಂಗನತಿಟ್ಟಿನಲ್ಲಿ ಪಕ್ಷಿಗಳ ಕಲರವ ನೋಡುಗರಿಗೆ ಮುದ ನೀಡುತ್ತಿದ್ದು, ಇನ್ನೊಂದು ಕಡೆ ಕೊರೊನಾ ಕಡಿಮೆ ಆಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮದ ಕಡೆ ಮುಖ ಮಾಡುತ್ತಿದ್ದಾರೆ.