Belagavi: ಮೈನವಿರೇಳಿಸಿದ ಇಂಡೋ - ಜಪಾನೀಸ್‌ ಜಂಟಿ ಸಮರಾಭ್ಯಾಸ

ಬೆಳಗಾವಿಯಲ್ಲಿ ಭಾರತ ಮತ್ತು ಜಪಾನ್ ಯೋಧರಿಂದ ನಡೆಯುತ್ತಿರುವ ಜಂಟಿ ಮಿಲಟರಿ ಸಮರಾಭ್ಯಾಸದಲ್ಲಿ ಮಹತ್ವದ ತಾಲೀಮು ನಡೆಸಲಾಯಿತು. ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಸಹಾಯದಿಂದ ಭಯೋತ್ಪಾದಕರ ಅಡಗು ತಾಣಗಳಿಗೆ ನುಗ್ಗಿ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ತರಬೇತಿ ಮೈನವಿರೇಳಿಸುವಂತಿತ್ತು. 

First Published Mar 11, 2022, 1:43 PM IST | Last Updated Mar 11, 2022, 2:02 PM IST

ಬೆಳಗಾವಿ (ಮಾ. 11): ಭಾರತ ಮತ್ತು ಜಪಾನ್ ಯೋಧರಿಂದ ನಡೆಯುತ್ತಿರುವ ಜಂಟಿ ಮಿಲಟರಿ ಸಮರಾಭ್ಯಾಸದಲ್ಲಿ ಇಂದು ಮಹತ್ವದ ತಾಲೀಮು ನಡೆಸಲಾಯಿತು. ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಸಹಾಯದಿಂದ ಭಯೋತ್ಪಾದಕರ ಅಡಗು ತಾಣಗಳಿಗೆ ನುಗ್ಗಿ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ತರಬೇತಿ ಮೈನವಿರೇಳಿಸುವಂತಿತ್ತು. 
 
ಬೆಳಗಾವಿಯ ಮರಾಠಾ ಲಘುಪದಾತಿ ದಳದಲ್ಲಿ ಭಾರತ ಜಪಾನ್ ಯೋಧರ ಜಂಟಿ ಸಮರಾಭ್ಯಾಸ ಮುಂದುವರಿದಿದೆ. ನಿನ್ನೆ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಹೆಲಿಕಾಪ್ಟರ್ ನಿಂದ ಉಗ್ರರ ಅಡಗುತಾಣಗಳ ಬಳಿ ಯೋಧರು ಆಗಮಿಸುವ ಬಗ್ಗೆ ತಾಲೀಮು ನಡೆಸಿದ್ರು. ಇಂದು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಒತ್ತೆಯಾಳಾಗಿರಿಸಿಕೊಂಡ  ಗ್ರಾಮಸ್ಥರನ್ನು ರಕ್ಷಿಸುವ ರೆಸ್ಕ್ಯೂ ಆಪರೇಷನ್ ರಣರೋಚಕವಾಗಿತ್ತು. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉಗ್ರರ ಅಡಗುತಾಣಗಳ ಪತ್ತೆ ಹಚ್ಚೋದು ಹೇಗೆ ಹಾಗೂ ಆ ಅಡಗುತಾಣಗಳ ಮೇಲೆ ದಾಳಿ ಮಾಡಿ ಉಗ್ರರು ಒತ್ತೆಯಾಳಾಗಿರಿಸಿಕೊಂಡ ನಾಗರಿಕರ ರಕ್ಷಿಸುವುದು ಹೇಗೆ ಎಂಬ ಬಗ್ಗೆ ಭಾರತ್ ಜಪಾನ್ ಯೋಧರು ಜಂಟಿ ರಕ್ಷಣಾ ಕಾರ್ಯಾಚರಣೆ ಡೆಮೋ ಮಾಡಿ ತೋರಿಸಿದ್ರು. ಕಾನ್ಪುರ್‌ನ ಐಐಟಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಹೆಲಿಕಾಪ್ಟರ್ ಡ್ರೋನ್, ಡ್ರೋನ್ ಸರ್ವಲೆನ್ಸ್ ಕ್ಯಾಮರಾ ಸಹಾಯದಿಂದ ಉಗ್ರರ ಅಡಗುತಾಣಗಳ ಪತ್ತೆ ಮಾಡೋದು ಹೇಗೆ ಎಂಬ ಅಣಕು ಪ್ರದರ್ಶನ ನಡೆಸಲಾಯಿತು. 

ಎದುರಿಗಿರುವ ವಸ್ತುಗಳನ್ನು ಸೆನ್ಸ್ ಮಾಡುತ್ತೆ, ಅಂಧರಿಗಾಗಿ ವಿಶೇಷ ಕನ್ನಡಕ ತಯಾರಿಸಿದ ವಿದ್ಯಾರ್ಥಿ

ಗ್ರೆನೇಡ್ ಸ್ಫೋಟಿಸಿ ಉಗ್ರರು ಅಡಗಿ ಕುಳಿತ ಮನೆಯ ಬಾಗಿಲು ಧ್ವಂಸ ಮಾಡಿ ಮನೆಯೊಳಗೆ ಎಂಟ್ರಿಯಾಗುವುದು, ಮನೆಯಲ್ಲಿದ್ದ ಉಗ್ರರ ಸದೆಬಡಿದು ಒತ್ತೆಯಾಳಾಗಿ ಇರಿಸಿಕೊಂಡ ನಾಗರಿಕರ ರಕ್ಷಣೆ ಮಾಡೋದು.. ಒಂದೊಂದು ದೃಶ್ಯವೂ ಮೈಜುಮ್ಮೆನಿಸುವಂತಿತ್ತು.  ಭಾರತ ಜಪಾನ್ ಯೋಧೆ ಜಂಟಿ ಸಮರಾಭ್ಯಾಸ ಕಳೆದ 10 ದಿನಗಳಿಂದ ನಡೆಯುತ್ತಿದ್ದು ಸಮರಾಭ್ಯಾಸ ಕೊನೆಯ ಹಂತಕ್ಕೆ ತಲುಪಿದೆ. ಭಯೋತ್ಪಾದರ ಅಡಗು ತಾಣಗಳಿಗೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೇಗೆ ನುಗ್ಗುವುದು, ಅವರನ್ನ ಸದೆ ಬಡೆಯುವುದು ಹೇಗೆ ಅನ್ನೋ ತಾಲೀಮು ನಡೆಸಲಾಯಿತು. ಭಾರತೀಯ ಸೇನೆಯ ಮರಾಠಾ ಲೈಟ್ ಇನ್ಪಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಸೇನೆಯ ತಲಾ ನಲವತ್ತು ಯೋಧರು ಮೂರು ತಂಡಗಳನ್ನು ಮಾಡಿಕೊಂಡು ಒಂದೊಂದು ಕಡೆಯಿಂದ ಎಂಟ್ರಿಯಾಗಿ ಕಾರ್ಯಾಚರಣೆಯ ತಾಲೀಮು ನಡೆಸಿದ್ರು. ಇದಕ್ಕೂ ಮುನ್ನ ಡ್ರೋಣ್ ಕ್ಯಾಮರಾಗಳ ಮೂಲಕ ಭಯೋತ್ಪಾದಕರ ಅಡಗು ತಾಣಗಳಲ್ಲಿನ ಚಲನವಲನವನ್ನ ಗಮನಿಸಲಾಯಿತು. ಇದಾದ ಬಳಿಕ ಪಕ್ಷಿ ಮಾದರಿಯಲ್ಲಿರುವ ಡ್ರೋಣ್‌ನ್ನು ಉಗ್ರರು ಅವಿತು ಕುಳಿತ ಮನೆಯೊಳಗೆ ಬಿಟ್ಟು ಎಷ್ಟು ಉಗ್ರರಿದ್ದಾರೆ, ಆ ಉಗ್ರರ ಬಳಿ ಯಾವೆಲ್ಲ ಶಸ್ತ್ರಾಸ್ತ್ರಗಳಿವೆ? ಉಗ್ರರು ಒತ್ತೆಯಾಳಾಗಿರಿಸಿಕೊಂಡ ನಾಗರಿಕರು ಎಷ್ಟು ಜನರಿದ್ದಾರೆ ಎಂಬ ಮಾಹಿತಿ ಪಡೆಯುವುದು ಹೇಗೆ ಎಂಬ ತರಬೇತಿ ನೀಡಲಾಯಿತು‌.

ಇನ್ನೂ ಧರ್ಮ ಗಾರ್ಡಿಯನ್ 2022 ಕಾರ್ಯಕ್ರಮದ ಹೆಸರಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್ ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಮತ್ತು ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ. 
 

Video Top Stories