Kolar: ಜಿಲ್ಲೆಯಲ್ಲಿ ಚಿನ್ನಕ್ಕಿಂತ ರೇಷ್ಮೆಯೇ ದುಬಾರಿ, ರೈತರ ಮುಖದಲ್ಲಿ ಮಂದಹಾಸ
ಕೋಲಾರ (Kolar) ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರೇಷ್ಮೆ ಉತ್ಪಾದನೆ ಕೂಡಾ ತೀವ್ರ ಕುಸಿತಕಂಡಿದೆ. ನಿರಂತರ ಮಳೆಯಿಂದ ರೈತರು ಬೆಳೆದಂತಹ ರೇಷ್ಮೆ (Silk) ಬೆಳೆ ಹಾಳಾಗಿರೋ ಪರಿಣಾಮ ಮಾರುಕಟ್ಟೆಯಲ್ಲಿ ರೇಷ್ಮೆಗೆ ಬಂಗಾರದ ಬೆಲೆ ಬಂದಿದೆ.
ಕೋಲಾರ (ಜ. 08): ಅವಿಭಜಿತ ಕೋಲಾರ (Kolar) ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ನಿರಂತರ ಮಳೆಯ ಪರಿಣಾಮ ರೇಷ್ಮೆ ( Silk) ಬೆಲೆ ದಿಢೀರ್ ಏರಿಕೆ ಕಂಡಿದೆ. ಮಳೆಗೆ ರೇಷ್ಮೆ ಬೆಳೆ ಹಾಳಾಗಿರೋ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ರೇಷ್ಮೆ ಪೂರೈಕೆಯಾಗುತ್ತಿಲ್ಲ.ಇದರ ಪರಿಣಾಮವಾಗಿ ರೇಷ್ಮೆಗೂಡು ಬೆಲೆ ಹೆಚ್ಚಾಗಿದೆ. ಎರಡ್ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ 352 ರೇಷ್ಮೆ ಬೆಳೆಗಾರರು 316 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಿಪ್ಪು ನೇರಳೆ ಬೆಳೆಗೆ ಹಾನಿಯಾಗಿದೆ.
ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರೇಷ್ಮೆ ಉತ್ಪಾದನೆ ಕೂಡಾ ತೀವ್ರ ಕುಸಿತಕಂಡಿದೆ. ನಿರಂತರ ಮಳೆಯಿಂದ ರೈತರು ಬೆಳೆದಂತಹ ರೇಷ್ಮೆ ಬೆಳೆ ಹಾಳಾಗಿರೋ ಪರಿಣಾಮ ಮಾರುಕಟ್ಟೆಯಲ್ಲಿ ರೇಷ್ಮೆಗೆ ಬಂಗಾರದ ಬೆಲೆ ಬಂದಿದೆ. ಕೋಲಾರದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮಿಶ್ರತಳಿ ರೇಷ್ಮೆಗೆ 700 ರುಪಾಯಿ ಇದ್ದರೆ, ಬೈವೋಲ್ಟೀನ್ ಬೆಲೆಯು ಕೆಜಿಗೆ 800 ರುಪಾಯಿ ದಾಟಿದೆ. ಗುಣಮಟ್ಟದ ರೇಷ್ಮೆ ಬೆಳೆ ಬೆಳೆದಿರುವ ರೈತರಿಗೆ ಸುಗ್ಗಿಕಾಲ ಎನ್ನುವಂತಾಗಿದೆ.
ಕೋಲಾರ ಜಿಲ್ಲೆಯ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯಲಾಗುತ್ತಿದೆ.19 ಸಾವಿರ ರೈತರು ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ರೇಷ್ಮೆ ಗೂಡಿನ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಬೆಲೆ ಏರಿಕೆಗೆ ಚಳಿಗಾಲವು ಕಾರಣವಾಗಿದೆ. ಚಳಿಗಾಲದಲ್ಲಿ ಹಿಪ್ಪುನೇರಳೆ ಉತ್ಪಾದನೆ ಕುಂಠಿತಗೊಂಡ ಪರಿಣಾಮ ರೇಷ್ಮೆಗೂಡು ಉತ್ಪಾದನೆಯೂ ಕಡಿಮೆಯಾಗಿದೆ.
ಕೋಲಾರದ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿನಿತ್ಯ 5 ಟನ್ ರೇಷ್ಮೆಗೂಡಿಗೆ ಬೇಡಿಕೆಯಿದೆ. ಆದ್ರೆ, ಚಳಿಗಾಲದ ಜೊತೆಗೆ ಕಳೆದ ತಿಂಗಳ ಮಳೆಯಿಂದಾಗಿ ಹಿಪ್ಪುನೇರಳೆ ಬೆಳೆ ಕೊಳೆತು ಬೆಳೆ ಹಾಳಾಗಿದೆ. ಮಾರುಕಟ್ಟೆಗೆ ನಿತ್ಯ 2 ಟನ್ ಮಾತ್ರ ರೇಷ್ಮೆಗೂಡು ಪೂರೈಕೆಯಾಗುತ್ತಿದೆ.ಇದ್ರಿಂದ ಪ್ರತಿ ಕೆಜಿ ರೇಷ್ಮೆಗೂಡಿಗೆ 700 ರಿಂದ 800 ರೂಪಾಯಿ ಮುಟ್ಟಿದೆ.
ಅಕ್ಟೋಬರ್ ತಿಂಗಳಲ್ಲಿ ಕೋಲಾರ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮಿಶ್ರತಳಿ ರೇಷ್ಮೆಗೆ ಬೆಲೆ ಗರಿಷ್ಠ 500-600 ರೂಪಾಯಿಯಿತ್ತು. ಆದ್ರೆ, ನವೆಂಬರ್ ತಿಂಗಳಲ್ಲಿ ಮಳೆಯ ನಂತರ ಒಂದು ಕೆಜಿ ರೇಷ್ಮೆಗೂಡು 700 ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಬೈವೋಲ್ಟಿನ್ 700 ರಿಂದ 900 ರುಪಾಯಿಗೆ ಮಾರಾಟವಾಗುತ್ತಿದೆ. ಕೊರೊನಾ ಹಾಗೂ ಚೀನಾದಲ್ಲಿಯೂ ಈ ವರ್ಷ ಹೆಚ್ಚು ಮಳೆ ಸುರಿದಿರುವ ಕಾರಣ ಅಲ್ಲಿಂದ ಬರುವ ರೇಷ್ಮೆಯ ಆಮದು ಸಹ ಸ್ಥಗಿತಗೊಂಡಿದೆ. ಚಳಿಗಾಲದಲ್ಲಿ ರೇಷ್ಮೆಗೆ ಸುಣ್ಣಕಟ್ಟು ರೋಗ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. ಬೆಲೆ ಏರಿಕೆಯಿಂದ ರೇಷ್ಮೆ ಬೆಳೆಗಾರರು ಸಂತೋಷ ಪಡುವಂಥ ಸ್ಥಿತಿ ಇಲ್ಲ. ಅದೃಷ್ಟವಿದ್ದವರಿಗೆ ಮಾತ್ರ ಬೆಲೆ ಏರಿಕೆಯ ಲಾಭ ಎನ್ನುವಂತಾಗಿದೆ.