ಬಿಡಿಎ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದ ಶಾಸಕರಿಗೆ ಸರ್ಕಾರ ಶಾಕ್!

ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಬೆಂಗಳೂರಿನ ಶಾಸಕರಿಗೆ ಕಾಂಗ್ರೆಸ್‌ ಸರ್ಕಾರ ಶಾಕ್‌ ನೀಡಿದೆ.

First Published Jun 8, 2023, 12:09 PM IST | Last Updated Jun 8, 2023, 12:09 PM IST

ಬೆಂಗಳೂರು (ಜೂ.08): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಲಾಭದಾಯಕ ಸ್ಥಾನವೆಂದೇ ಕರೆಯುತ್ತಿದ್ದ ಹಾಗೂ ಭ್ರಷ್ಟಾಚಾರಕ್ಕೆ ರಾಜಾತಿಥ್ಯವೆಂದೇ ಹೇಳಲಾಗುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧ್ಯಕ್ಷ ಸ್ಥಾನದ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದರು. ಆದರೆ, ಈಗ ಸರ್ಕಾರದಿಂದ ಯಾವೊಬ್ಬ ಜನಪ್ರತಿನಿಧಿಯನ್ನೂ ನೇಮಕ ಮಾಡದೇ ಹಿರಿಯ ಐಎಎಸ್‌ ಅಧಿಕಾರಿ ರಾಕೇಶ್‌ ಸಿಂಗ್‌ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಒಟ್ಟು 10 ಪ್ರಾಧಿಕಾರಿಗಳಿಗೆ ರಾಕೇಶ್‌ ಸಿಂಗ್‌ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿದೆ. ಈ ಮೂಲಕ ಶಾಸಕರಾಗದಿದ್ದರೂ, ಸಚಿವರಾಗದಿದ್ದರೂ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ನಡೆಸಬಹುದು ಎಂದು ಕನಸು ಕಂಡಿದ್ದವರಿಗೆ ಈಗ ಕಾಂಗ್ರೆಸ್‌ ಸರ್ಕಾರ ಶಾಕ್‌ ನೀಡಿದೆ. ಇನ್ನು ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ವತಃ ಬಿಡಿಎಗೆ ಭೇಟಿ ನೀಡಿ ರಾಕೇಶ್‌ ಸಿಂಗ್‌ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಹೆಣ್ಣೆಂಬ ಕಾರಣಕ್ಕೆ ಹುಟ್ಟಿದ ಮಗುವನ್ನೇ ಮುಳ್ಳಲ್ಲಿ ಬೀಸಾಡಿ ಹೋದ ಪೋಷಕರು

ಶಿವರಾಮ ಕಾರಂತ ಬಡವಾಣೆಯ ಬಗ್ಗೆ ಚರ್ಚೆ: ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಬಿಡಿಎಗೆ ನಾನು ಇಂದು ಎರಡನೇ ಬಾರಿಗೆ ಭೇಟಿ ಕೊಟ್ಟಿದ್ದೇನೆ. ಶಿವರಾಮ ಕಾರಂತ ಬಡವಾಣೆ ಕೆಲಸ ಕಾರ್ಯ ಹೇಗೆ ಆಗುತ್ತಿದೆ ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇನೆ.  ನಿವೃತ್ತ ನ್ಯಾಯಾಧೀಶ ಆಯೋಗದಲ್ಲಿರುವ ಮೂರು ಜನರ ಜೊತೆ ಚರ್ಚೆ ಮಾಡಿದ್ದೇನೆ. 3 ಸಾವಿರಕ್ಕೂ ಹೆಚ್ಚು ಜಾಗವನ್ನ ಕೊಟ್ಟಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಲೇಔಟ್ ಮಾಡ್ತಿದ್ದಾರಾ ಅಥವಾ ಸಾಮಾನ್ಯ ಲೇಔಟ್ ಮಾಡ್ತಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಯಾವ ರೀತಿ ಕೆಲಸ ನಡೆಯುತ್ತಿದೆ ಅನ್ನೋದನ್ನ ತಿಳಿಸಿದ್ದಾರೆ. ಸರ್ಕಾರಕ್ಕೂ ಅನುಕೂಲ ಆಗಬೇಕು. ಜಮೀನು ಕಳೆದುಕೊಂಡವರಿಗೂ ಒಳ್ಳೆ ಬೆಲೆ ಸಿಗಬೇಕು. ಬಡವರಿಗೂ ಅನ್ಯಾಯ ಆಗಬಾರದು, ಅಂತವರಿಗೆ ಕಾನೂನು ಅಡಿಯಲ್ಲಿ ಯಾವ ರೀತಿ ಸಹಾಯ ಮಾಡಲಾಗುತ್ತೋ ಮಾಡುತ್ತೇವೆ ಎಂದು ಹೇಳಿದರು.