ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲ, ಪ್ರಚಾರಕ್ಕಷ್ಟೇ ಬಳಸಿದ್ದಾರೆ: ಪರೇಶ್‌ ಮೇಸ್ತಾ ತಂದೆ ಅಸಮಾಧಾನ

Paresh Mesta Case: ಎಲ್ಲಾ ಜನಪ್ರತಿನಿಧಿಗಳು ಪರೇಶ್ ಮೇಸ್ತಾ ಪ್ರಕರಣವನ್ನು ಪ್ರಚಾರಕ್ಕೆ ಬಳಸಿಕೊಂಡರಷ್ಟೇ ಎಂದು ತಂದೆ ಕಮಲಾಕರ ಮೇಸ್ತಾ ಹೇಳಿದ್ದಾರೆ  

First Published Oct 4, 2022, 5:01 PM IST | Last Updated Oct 4, 2022, 5:01 PM IST

ಕಾರವಾರ (ಅ.4) : ಹೊನ್ನಾವರದ ಯುವಕ ಪರೇಶ್‌ ಮೇಸ್ತಾನದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ನ್ಯಾಯಾಲಯಕ್ಕೆ ಸೋಮವಾರ ವರದಿ ಸಲ್ಲಿಸಿದೆ. ಸಿಬಿಐ ವರದಿಗೆ ಹಿಂದೂ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ಪರೇಶ್‌ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಕೂಡ ಸಿಬಿಐ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸಿಬಿಐ ವರದಿ ಮೇಲೆ ಅಸಮಾಧಾನವಿದೆ, ಎಲ್ಲಾ ಜನಪ್ರತಿನಿಧಿಗಳು ಪರೇಶ್ ಮೇಸ್ತಾ ಪ್ರಕರಣವನ್ನು ಬಳಸಿಕೊಂಡರಷ್ಟೇ, ಸಿಬಿಐ ವರದಿಯ ಬಳಿಕ ಯಾವ ಜನಪ್ರತಿನಿಧಿಯೂ ಕರೆ ಮಾಡಿ ಮಾತನಾಡಿಸಿಲ್ಲ, ಯಾವ ಪಕ್ಷದಿಂದಲೂ‌ ನಮಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ. 

"ಮುಂದಿನ ದಿನಗಳಲ್ಲಿ ಎನ್‌ಐಎಗೆ ಈ ಪ್ರಕರಣ ನೀಡಲು ಒತ್ತಾಯ ಮಾಡುವ ಬಗ್ಗೆ ಚಿಂತನೆ ನಡೆಸ್ತೇನೆ, ನನ್ನ ಮಗನ ಕೊಲೆಯಾದ ನಂತರ ಸಾಕ್ಷ್ಯ ನಾಶ ಮಾಡಲಾಗಿದೆ, ಅವನನ್ನು ಹೊಡೆದು ಕೊಲೆ ಮಾಡಿಯೇ ಕೆರೆಗೆ ಬಿಸಾಕಿದ್ದಾರೆ, ಮಗನನ್ನು ಕೊಲೆ ಮಾಡಿದ ದಿನವೇ ಸ್ಥಳೀಯ ದೇವಸ್ಥಾನ ಹಾಗೂ ಜ್ಯುವೆಲ್ಲರಿ ಶಾಪ್‌ನ ಸಿಸಿ ಕ್ಯಾಮೆರಾ ಹಾಳಾಗಿದೆ,  ನನ್ನ‌ ಮಗನ ಕೊಲೆ ಪೂರ್ವ ನಿಯೋಜಿತ ಕೃತ್ಯ, ಪೊಲೀಸರು ಶಾಮೀಲಾಗಿದ್ದಾರೆ,  ನನ್ನ ಮಗನಿಗೆ ಈಜಲು ಗೊತ್ತಿದೆ, ಕೆರೆಯಲ್ಲಿ ಮುಳುಗಿ ಸಾಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ. 

ಅತ್ಯಂತ ಮೋಸ, ಮರುತನಿಖೆಯಾಗಲಿ: ಪರೇಶ್ ಮೇಸ್ತಾ ಸಾವು, ಸಿಬಿಐ ವರದಿಗೆ ಮುತಾಲಿಕ್ ಕಿಡಿ

"ಬಿಜೆಪಿ ಸರ್ಕಾರದ ಮೇಲೂ ನನಗೆ ಅಸಮಾಧಾನವಿದೆ, ಬಿಜೆಪಿಯವರು ಕೂಡಾ ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡರು, ಸರಕಾರದಿಂದ 5 ಲಕ್ಷ ರೂ. ಪರಿಹಾರ ಸಿಕ್ಕಿದೆ ಹೊರತು ಬೇರೇನೂ ಸಿಕ್ಕಿಲ್ಲ,  ಬಿಜೆಪಿ ಸರಕಾರದಿಂದ ಯಾವುದೇ ಆರ್ಥಿಕ ಸಹಕಾರ ದೊರಕಿಲ್ಲ, ಪ್ರಚಾರಕ್ಕೆ ಮಾತ್ರ ನಮ್ಮನ್ನು ಬಳಸಿಕೊಂಡಿದ್ದಾರೆ" ಎಂದು ಪರೇಶ್‌ ಮೇಸ್ತಾ ತಂದೆ ನೋವು‌ ತೋಡಿಕೊಂಡಿದ್ದಾರೆ 

Video Top Stories