ಮಂಡ್ಯ ಡಿಸಿ ಕಚೇರಿ ಎದುರು ರೈತ ಸಂಘಗಳ ಹೈಡ್ರಾಮಾ: ತಾರಕಕ್ಕೇರಿದ ಜಗಳ...!
ರೈತರ ಸಮಸ್ಯೆಗಳನ್ನು ಹೊತ್ತು ಡಿಸಿ ಭೇಟಿಗೆ ತೆರಳಿದ್ದ ರೈತ ಸಂಘದ 2 ಬಣಗಳು ತಮ್ಮ ಮೂಲ ಉದ್ದೇಶ ಮರೆತು ಕಿತ್ತಾಡಿಕೊಂಡಿದ್ದು ಮುಜುಗರ ಉಂಟುಮಾಡಿದೆ.
ಮಂಡ್ಯ(ಡಿ.06): ಮಂಡ್ಯದ ಡಿಸಿ ಕಚೇರಿ ಆವರಣದಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ರಾಜ್ಯ ರೈತ ಸಂಘದ ಎರಡು ಬಣಗಳ ನಡುವೆ ಗಲಾಟೆ ನಡೆದಿದ್ದು, ದೂರು ಪ್ರತಿದೂರು ದಾಖಲಾಗಿದೆ. ಮಂಡ್ಯ ಡಿಸಿ ಆಫೀಸ್ ಆವರಣ ರಣರಂಗವಾಗಿತ್ತು. ಒಗ್ಗಟ್ಟಿನಿಂದ ಹೋರಾಡಬೇಕಿದ್ದ ರೈತ ಸಂಘಟನೆಗಳೇ ಪರಸ್ಪರ ಕಿತ್ತಾಡಿಕೊಂಡಿದ್ರು. ಡಿಸಿಗೆ ಮನವಿ ಸಲ್ಲಿಸಲು ಬಂದಿದ್ದ ವೇಳೆ 2 ಬಣಗಳ ರೈತ ಮುಖಂಡರು ಜಗಳ ಶುರು ಮಾಡಿದ್ರು.
ಸಾಲ ವಸೂಲಿ ವೇಳೆ ಬ್ಯಾಂಕ್ ರೈತರಿಗೆ ಕಿರುಕುಳ ನೀಡ್ತಿದೆ ಅಂತ ರೈತ ಸಂಘಗಳು ಆಕ್ರೋಶ ವ್ಯಕ್ತಪಡಿಸ್ತಿವೆ. ಬ್ಯಾಂಕ್ಗಳ ನಡೆ ವಿರೋಧಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬ್ಯಾಂಕ್ ಆಫ್ ಬರೋಡಾ ಎದುರು ಪ್ರತಿಭಟಿಸಿದ್ರು. ಬಳಿಕ ಡಿಸಿಗೆ ಮನವಿ ಸಲ್ಲಿಸಲು ತೆರಳಿದ್ರು. ಅದೇ ಸಮಯಕ್ಕೆ ರೈತ ಬಣದ ಅಧ್ಯಕ್ಷ ಇಂಗಲಕುಪ್ಪೆ ಕೃಷ್ಣ ಮುಖಾಮುಖಿಯಾದ್ರು. ಮೊದಲಿಂದಲೂ ರೈತ ಸಂಘ ವಿರೋಧಿಸಿ, ಅಸಮಾಧಾನಕ್ಕೆ ಗುರಿಯಾಗಿದ್ದ ಕೃಷ್ಣ ಬಣ ನೋಡ್ತಿದ್ದಂತೆ, ಉನ್ನೊಂದು ಬಣದ ಕಾರ್ಯಕರ್ತರು ಸಿಡಿಮಿಡಿಗೊಂಡರು. ಬಡಗಲಪುರ ನಾಗೇಂದ್ರ ಮೇಲೆ ಕೃಷ್ಣ ಬೆಂಬಲಿಗರು ಹಲ್ಲೆ ನಡೆಸಿ, ಕಾರು ಹತ್ತಿಸಲು ಪ್ರಯತ್ನಿಸಿದ್ರು.
ಭಾರತ್ ಜೋಡೋ ಮಾಡಿದ ಕಾಂಗ್ರೆಸ್‌ನಿಂದಲೇ ಇದೀಗ ಉತ್ತರ-ದಕ್ಷಿಣ ವಿಭಜನೆ ಕಿಡಿ!
ಕೂಡಲೇ ಬಡಗಲಪುರ ನಾಗೇಂದ್ರ ಪರ ಕಾರ್ಯಕರ್ತರು ಕೃಷ್ಣರನ್ನು ಬಂಧಿಸಬೇಕು ಅಂತ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು. ಕೃಷ್ಣ ರೈತ ಸಂಘದ ಹೆಸರಿನಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆ. ಕಾರಿಗೆ ಅಕ್ರಮವಾಗಿ ನಾಮಫಲಕ ಹಾಗೂ ಹಸಿರು ದೀಪ ಹಾಕಿಕೊಂಡಿದ್ದು ಕಾರನ್ನು ವಶಕ್ಕೆ ಪಡೆಯಬೇಕು ಅಂತ ಒತ್ತಾಯಿಸಿದರು. ಕೃಷ್ಣ ನಮ್ಮ ಮೇಲೆ ಬೇಕಂತಲೇ ದೂರು ನೀಡಿದ್ದಾರೆ, ನನ್ನ ಕೊಲೆಗೆ ಯತ್ನಿಸಿದ್ದಾರೆ ಅಂತ ಬಡಗಲಪುರ ನಾಗೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆ ದುರಸ್ತಿ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ನೀಡಲು ಹೋಗಿದ್ವಿ. ಆಗ ನಾಗೇಂದ್ರ ಬೆಂಬಲಿಗರು ಇಲ್ಲಸಲ್ಲದ ಹೇಳಿಕೆ ನೀಡುತ್ತೀಯ ಅಂತ ನನ್ನ ಬೆದರಿಸಿದ್ರು. ನನ್ನ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದರು ಅಂತ ಕೃಷ್ಣ ಕಿಡಿಕಾರಿದ್ದಾರೆ. ರೈತರ ಸಮಸ್ಯೆಗಳನ್ನು ಹೊತ್ತು ಡಿಸಿ ಭೇಟಿಗೆ ತೆರಳಿದ್ದ ರೈತ ಸಂಘದ 2 ಬಣಗಳು ತಮ್ಮ ಮೂಲ ಉದ್ದೇಶ ಮರೆತು ಕಿತ್ತಾಡಿಕೊಂಡಿದ್ದು ಮುಜುಗರ ಉಂಟುಮಾಡಿದೆ.