Bagalkot: ಸವುಳು ಜವುಳು ಭೂಮಿಯಿಂದ ಕಂಗೆಟ್ಟ ಅನ್ನದಾತ: ಕಂಗಾಲಾದ ರೈತರು..!

*  ಸಮಸ್ಯೆ ಮುಕ್ತಿಗೆ ಸರ್ಕಾರದ ಪ್ರಾಯೋಗಿಕ ಯೋಜನೆ
*  ಮುಧೋಳ ಮತ್ತು  ಜಮಖಂಡಿಯಲ್ಲಿ ವಿನೂತನ ಪ್ರಯತ್ನ
*  ಅಂದಾಜು 15 ಸಾವಿರ ಎಕರೆ ಪ್ರದೇಶ ಸವುಳು ಜವುಳು 
 

First Published Mar 5, 2022, 8:55 AM IST | Last Updated Mar 5, 2022, 8:55 AM IST

ಬಾಗಲಕೋಟೆ(ಮಾ.05): ರಾಜ್ಯದಲ್ಲಿಯೇ ಅತಿಹೆಚ್ಚು ಸವುಳು ಜವುಳು ಭೂಮಿಯನ್ನ ಬಾಗಲಕೋಟೆ ಜಿಲ್ಲೆ ಹೊಂದಿದ್ದು, ಜಿಲ್ಲೆಯ ಮುಧೋಳ ಮತ್ತು ಜಮಖಂಡಿ ತಾಲೂಕಿನಲ್ಲಿ 10 ರಿಂದ 15 ಸಾವಿರಕ್ಕೂ ಅಧಿಕ ಎಕರೆ ಭೂಮಿ ಇದೀಗ ಸವುಳು ಜವುಳಾಗಿದೆ. ನಿರಂತರ ನದಿ ನೀರು ಹಾಯಿಸಿ, ಕಬ್ಬು ಬೆಳೆಯುತ್ತ ಬಂದಿರೋ ರೈತರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಇದರೊಟ್ಟಿಗೆ ರಾಜ್ಯದಲ್ಲಿ ಶೇ.35ರಷ್ಟು ನೀರಾವರಿ ಜಮೀನು, ಶೇ.65ರಷ್ಟು ಒಣಬೇಸಾಯದ ಜಮೀನಿದೆ. ಇವುಗಳ ಮಧ್ಯೆ ನೀರಾವರಿ ಯೋಜನೆಗಳನ್ನ ಅನುಷ್ಠಾನಗೊಳಿಸುವಲ್ಲಿ ಹಲವೆಡೆ ಸವುಳು ಜವುಳು ಭೂಮಿಯ ಎಫೆಕ್ಟ್ ಆಗಿದ್ದು, ಜಿಲ್ಲೆಯಲ್ಲಿ ಘಟಪ್ರಭಾ ನದಿಯ ಇಕ್ಕೆಲದಲ್ಲಿರೋ 10ಕ್ಕೂ ಅಧಿಕ ಹಳ್ಳಿಗಳ ರೈತ್ರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. 

ಸದಾ ನೀರಿನಿಂದ ನಿಂತು ಭೂಮಿಯಲ್ಲಿ ಬೇರೆ ಬೇರೆ ಬೆಳೆ ಬೆಳೆಯಲಾಗದೆ ರೈತ್ರು ಕೈಕಟ್ಟಿ ಕೂರುವಂತಾಗಿದೆ. ಹೀಗಾಗಿ ಈ ಭಾಗದ ರೈತಾಪಿ ವರ್ಗ ತಮ್ಮ ಜಮೀನನ್ನ ಬಿಟ್ಟು ಬೇರೆಡೆ ಕೆಲ್ಸ ಮಾಡೋದು ಮತ್ತು ತಮ್ಮ ಹೊಲ ಮಾರಾಟ ಮಾಡಿ ಬೇರೆ ಕಡೆಗೆ ಹೊಲ ಖರೀದಿಗೆ ಮುಂದಾಗೋದು ಜೊತೆಗೆ ಇನ್ನೂ ಕೆಲವರು ಊರನ್ನೇ ಬಿಟ್ಟು ಹೋಗುವಂತಹ ಪರಿಸ್ಥಿತಿ ಬಂದಿದ್ದು, ರೈತ್ರು ಅತಂತ್ರರಾಗಿದ್ದಾರೆ ಅಂತಾರೆ ಸ್ಥಳೀಯ ರೈತ್ರು. 

Karnataka Budget 2022 ರಾಜ್ಯ ಬಜೆಟ್ ಕುರಿತಾಗಿ ತಜ್ಞರು ಏನಂತಾರೆ?

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಅತಿಹೆಚ್ಚಾಗಿ ಸವುಳು ಜವುಳು ಭೂಮಿ ಕಂಡು ಬಂದಿರೋ ಹಿನ್ನೆಲೆಯಲ್ಲಿ ಇದನ್ನ ಸರ್ಕಾರದ ಮಟ್ಟಕ್ಕೆ ಚರ್ಚೆಗೆ ತಂದಿದ್ದಾರೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ.  ಜಲಸಂಪನ್ಮೂಲ ಇಲಾಖೆ ಮೂಲಕ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಹೆಸರಿನ ವಾಲ್ಮೀ ಸಂಸ್ಥೆಯ ಅಡಿಯಲ್ಲಿ ಇದೀಗ ರೈತರ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದೆ. 

ಈ ಸಂಸ್ಥೆಯ ಮೂಲಕ ಸವುಳು ಜವುಳು ಭೂಮಿಯನ್ನ ಪರಿವರ್ತನೆ ಮಾಡುವ ಹೊಸ ಪ್ರಯತ್ನ ನಡೆಸುತ್ತಿದೆ. ನೂತನ ತಂತ್ರಜ್ಞಾನದ ಮೂಲಕ ಪೈಪ್ ಮತ್ತು ಮರಳು ಸೇರಿದಂತೆ ವೈಜ್ಞಾನಿಕ ವಸ್ತುಗಳನ್ನ ಬಳಸಿ ಸವುಳು ಜವುಳು ಭೂಮಿಯನ್ನ ಮತ್ತೇ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ಇವುಗಳ ಮಧ್ಯೆ ರೈತರಿಗಾಗಿ ತರಬೇತಿ  ಮತ್ತು ಮಾಹಿತಿ ಕಾರ್ಯಾಗಾರವನ್ನೂ ಸಹ ಮುಧೋಳದಲ್ಲಿ ಏರ್ಪಡಿಸಲಾಗಿದೆ. ಈ ಮೂಲಕ ರೈತರ ಸಮಸ್ಯೆಗೆ ಮುಕ್ತಿ ಹಾಡಲು ಸರ್ಕಾರ ಮುಧೋಳ ಮತ್ತು ಜಮಖಂಡಿ ತಾಲೂಕಿನ ಪ್ರಾಯೋಗಿಕ ಯೋಜನೆ ಜಾರಿಗೊಳಿಸಿದೆ ಅಂತಾರೆ ಸಚಿವ ಗೋವಿಂದ ಕಾರಜೋಳ.