Asianet Suvarna News Asianet Suvarna News

Chalukya Utsava: ಬಾಗಲಕೋಟೆಯಲ್ಲಿ ಮತ್ತೆ ಶುರುವಾಯ್ತು ಚಾಲುಕ್ಯ, ರನ್ನ ಉತ್ಸವದ ಕೂಗು

*   ಮೈಸೂರು ದಸರಾ, ಕಿತ್ತೂರು ಉತ್ಸವಕ್ಕೆ ಇಲ್ಲದ ಕೋವಿಡ್, ಅನುದಾನ ಕೊರತೆ ಇಲ್ಲೇಕೆ?
*   ಚಾಲುಕ್ಯ ದೊರೆಗಳು, ರನ್ನರಂಥ ಮಹಾಪುರುಷರ ಹೆಸರಲ್ಲಿ ಉತ್ಸವ ಯಾಕಿಲ್ಲ?
*   ಸಾಕಷ್ಟು ಕಲಾವಿದರಿಗೆ ಸಾಹಿತಿಗಳಿಗೆ ವೇದಿಕೆಯಾಗುವ ಸಾಂಸ್ಕೃತಿಕ ಉತ್ಸವ
 

ಬಾಗಲಕೋಟೆ(ಡಿ.01):  ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಅಂದ್ರೆ ಸಾಕು ಥಟ್ಟನೆ ನೆನಪಾಗೋದು ಬಾದಾಮಿ ಚಾಲುಕ್ಯರು ಹಾಗೂ ಕವಿಚಕ್ರವರ್ತಿ ರನ್ನ. ಯಾಕಂದ್ರೆ ಈ ಜಿಲ್ಲೆಗೆ ಬಂದರೆ ಚಾಲುಕ್ಯರ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲೆಂದೆ ಹೆಸರಾದ ಐಹೊಳೆ, ವಿಶಿಷ್ಟ ದೇಗುಲಗಳನ್ನ ಹೊಂದಿರೋ ಬಾದಾಮಿ, ಪಟ್ಟದಕಲ್ಲು, ಜೊತೆಗೆ ಮಹಾಕೂಟ ಸೇರಿದಂತೆ ವಿಭಿನ್ನವಾಗಿ ಚಾಲುಕ್ಯರು ಆಳಿದ ಇರುವ ಕುರುಹುಗಳು ಕಣ್ಮನ ಸೆಳೆಯುತ್ತವೆ.

ಐತಿಹಾಸಿಕ ದೇಗುಲಗಳ ದರ್ಶನ ಮನಸ್ಸಿಗೆ ಮುದ ನೀಡುತ್ತದೆ. ಚಾಲುಕ್ಯರ ಗತಕಾಲದ ವೈಭವ ಕಣ್ಣಿಗೆ ರಾಚುತ್ತದೆ‌. ಇನ್ನು ಗದಾಯುದ್ಧ ಕವಿ ರನ್ನ ಕೂಡ ಹುಟ್ಟಿದ್ದು ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ. ಇವರ ನೆನಪಿಗಾಗಿ ನಡೆಯುತ್ತಿದ್ದ ಚಾಲುಕ್ಯ ಉತ್ಸವ, ರನ್ನ ಉತ್ಸವಗಳು ಕಳೆದ ನಾಲ್ಕೈದು ವರ್ಷದಿಂದ ನಡೆದಿಲ್ಲ. ಇದರಿಂದ ಎಲ್ಲೋ ಒಂದು ಕಡೆ ಮಹಾನ್ ಪುರುಷರ ಸ್ಮರಣೆಯನ್ನು ಮರೆಮಾಚುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕಳೆದ ಎರಡು ವರ್ಷವಂತೂ ಕೊರೋನಾದಲ್ಲಿ ಹಬ್ಬ ಹರಿದಿನಗಳೇ ಇಲ್ಲ. ಹೀಗಾಗಿ ಈಗ ಎಲ್ಲೆಡೆ ಕೊರೋನಾ ಮುಕ್ತವಾಗಿ ಉತ್ಸವಗಳು ನಡೆಯುತ್ತಿದ್ದು, ಕೂಡಲೇ ಜಿಲ್ಲೆಯಲ್ಲಿ ಚಾಲುಕ್ಯ ಉತ್ಸವ ಹಾಗೂ ರನ್ನ ಉತ್ಸವಗಳನ್ನ ಸರ್ಕಾರ ನಡೆಸುವಂತಾಗಲಿ ಅಂತಾರೆ ಸ್ಥಳೀಯರು.

Belagavi Parishat Fight: ಚುನಾವಣಾ ಏಜೆಂಟರಾಗಿ ಸತೀಶ್ ಜಾರಕಿಹೊಳಿ ಅಖಾಡಕ್ಕೆ

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಈ ಉತ್ಸವ ಕೊನೆಗೆ ನಡೆದದ್ದು 2015ರಲ್ಲಿ .ಅಂದು ನಡೆದ ಉತ್ಸವಗಳನ್ನು ಮುಂದೆ ಮೂರು ವರ್ಷ ಬರಗಾಲದ ನೆಪ ನೀಡಿ ಮುಂದುವರೆಸಲಾಗಿತ್ತು. ನಂತರ  ಕೋವಿಡ್ ಕಾರಣ ನೀಡಿ ಉತ್ಸವ  ಮಾಡಿಲ್ಲ. ಜೊತೆಗೆ ಅನುದಾನದ ಕೊರತೆ ಅಂತಾನೂ ಸಚಿವರು ಕಾರಣ ನೀಡಿದ್ದಾರೆ. ಈ ಬಗ್ಗೆ ಪ್ರತಿ ವರ್ಷ ಸ್ಥಳೀಯರು ಮನವಿ ಮಾಡುತ್ತಾ ಬಂದರೂ ಉತ್ಸವ ಆಚರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಚಾಶಕ್ತಿ ತೋರಿಸುತ್ತಿಲ್ಲ. ಈ ಹಿಂದೆ 2015ರಲ್ಲಿ ಉತ್ಸವಗಳು ನಡೆದಾಗ ಚಿತ್ರ ಸಂಗೀತ ನಿರ್ದೇಶಕರು, ಗಾಯಕರು ಸೇರಿದಂತೆ ಅನೇಕ ಸ್ಥಳೀಯ ಜನಪದ ಸಂಗೀತ ಕಲಾವಿದರು ಉತ್ಸವದಲ್ಲಿ ಮನರಂಜನೆ ನೀಡಿದ್ದರು. ಮಹಾನ್ ನಾಯಕರ ಸ್ಮರಣೆ ಐತಿಹಾಸಿಕ ಮೆಲುಕು ನಡೆದಿತ್ತು. ಇನ್ನು ಮೈಸೂರು ದಸರಾ, ಕಿತ್ತೂರು ಉತ್ಸವ ಎಲ್ಲವನ್ನೂ ಮಾಡಲಾಗಿದೆ. ಕೋವಿಡ್ ನಿಯಮಾವಳಿ ಪ್ರಕಾರವೆ ಮಾಡಬಹುದು. ಉತ್ಸವದಿಂದ ಸಾಕಷ್ಟು ಕಲಾವಿದರಿಗೆ ಸಾಹಿತಿಗಳಿಗೆ ವೇದಿಕೆಯಾಗುತ್ತದೆ. ನಮ್ಮ ಇತಿಹಾಸದ ಮಹತ್ವ  ಮುಂದಿನ ಪೀಳಿಗೆಗೆ ತಿಳಿಸಿದಂತಾಗುತ್ತದೆ. ಆದ್ದರಿಂದ ಈ ವರ್ಷ ಉತ್ಸವ ಮಾಡಬೇಕು, ಜೊತೆಗೆ ಪ್ರತಿವರ್ಷವೂ ಚಾಲುಕ್ಯ, ರನ್ನ ಉತ್ಸವ ಮಾಡುವ ಮೂಲಕ  ಮಹಾನ್ ನಾಯಕರಿಗೆ ಗೌರವ ಸಲ್ಲಿಬೇಕು, ಸಿಎಂ ಈ ಬಗ್ಗೆ ಗಮನಹರಿಸಬೇಕು ಅಂತಿದ್ದಾರೆ ಸ್ಥಳೀಯರು.                           

ಒಟ್ಟಿನಲ್ಲಿ ಐದಾರು ವರ್ಷ ವಿವಿಧ ಕಾರಣ ನೀಡಿ ಮುಂದೆ ಸಾಗಿದ ಚಾಲುಕ್ಯ ,ರನ್ನ ಉತ್ಸವ ಈ ಬಾರಿ ನಡೆಯಬೇಕೆಂಬ ಕೂಗು ಈ ವರ್ಷವೂ ಶುರುವಾಗಿದ್ದು. ಜಿಲ್ಲಾಡಳಿತ ಉತ್ಸವದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತೆ ಅಂತ ಕಾದು ನೋಡಬೇಕಿದೆ. 
 

Video Top Stories