ಸಾವಿನಲ್ಲೂ ಸಾರ್ಥಕತೆ... ಆರು ಜನರ ಬಾಳಿಗೆ ಬೆಳಕಾದ ದರ್ಶನ್
ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ
ಮೈಸೂರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ದಾನ ಮಾಡಲಾಗಿದ್ದು, ನಗರದ ಬಿಜಿಎಸ್ ಅಪೋಲೊ ಆಸ್ಪತ್ರೆಯಿಂದ ಚೆನ್ನೈಗೆ ಜೀವಂತ ಹೃದಯವನ್ನು ರವಾನೆ ಮಾಡಲಾಗಿದೆ. 24 ವರ್ಷದ ದರ್ಶನ್ ಎಂಬ ಯುವಕ ಜ.18ರಂದು ರಸ್ತೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಅಪಘಾತದ ರಭಸಕ್ಕೆ ಯುವಕನ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಯುವಕನ ಮನೆಯವರು ಅಂಗಾಂಗ ದಾನಕ್ಕೆ ಮುಂದಾಗಿದ್ದು, ದರ್ಶನ್ ಹೃದಯವನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ಏರ್ ಲಿಫ್ಟ್ ಮಾಡಲಾಯಿತು.
ಚೆನ್ನೈನ ಎಂ.ಜಿ.ಎಂ ಹೆಲ್ತ್ ಕೇರ್‌ಗೆ ಈ ಜೀವಂತ ಹೃದಯ ರವಾನೆ ಮಾಡಲಾಗಿದ್ದು, ಇದಕ್ಕಾಗಿ ಆಂಬುಲೆನ್ಸ್ ತೆರಳಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ಮೈಸೂರಿನಲ್ಲಿ ವಾಸವಾಗಿದ್ದ ದರ್ಶನ್ ಮೂಲತಃ ಗುಂಡ್ಲುಪೇಟೆಯವರಾಗಿದ್ದರು. ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ನಿರ್ವಹಿಸುತ್ತಿದ್ದ ದರ್ಶನ್‌ಗೆ ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದು, ಎರಡು ತಿಂಗಳ ಮಗುವಿದೆ. ಅಂಗಾಂಗವಲ್ಲದೇ ಕಣ್ಣುಗಳನ್ನು ಹಾಗೂ ದೇಹದ ಇತರ ಭಾಗಗಳನ್ನು ಕೂಡ ದಾನ ಮಾಡಿರುವ ದರ್ಶನ್ ಆರು ಜನರ ಬಾಳಿಗೆ ಬೆಳಕಾಗಿದ್ದಾರೆ.