BIG 3ಸಾರಿಗೆ ವ್ಯವಸ್ಥೆ ಇಲ್ಲದೆ ಶಾಲೆ ಬಿಟ್ಟ 14 ಮಕ್ಕಳು: ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?
ಸಾರಿಗೆ ಸೌಲಭ್ಯವಿಲ್ಲದೆ 14 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದ ಘಟನೆ, ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆರೂರು ಹಾಡಿಯಲ್ಲಿ ನಡೆದಿದೆ.
ಹೆರೂರು ಹಾಡಿಯಲ್ಲಿ 120ಕ್ಕೂ ಕುಟುಂಬಗಳಿವೆ. ಇಲ್ಲಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 8 ಕಿಲೋ ಮೀಟರ್ ದೂರದಲ್ಲಿರುವ ಬಸವನಹಳ್ಳಿ, ಕಾನ್‍ಬೈಲು ಮತ್ತು ಏಳನೇ ಹೊಸಕೋಟೆ ಶಾಲೆಗಳಿಗೆ ಹೋಗಬೇಕು. ಶಾಲೆಗೆ ಹೋಗಬೇಕೆಂದರೆ ನಾಲ್ಕು ಕಿಲೋ ಮೀಟರ್ ಉದ್ದದ ವನ್ಯಜೀವಿ ಕಾಡಿನಲ್ಲಿ ನಡೆದು ಸಾಗಬೇಕು. ನಿತ್ಯ ಆನೆ, ಹುಲಿಗಳು ಓಡಾಡುವ ಈ ಕಾಡಿನಲ್ಲಿ ನಡೆದು ಶಾಲೆಗೆ ಹೋಗುವುದಾದರೂ ಹೇಗೆ ಎನ್ನುವ ದೊಡ್ಡ ಸಮಸ್ಯೆ ಎದುರಾಗಿದೆ. ಕಾಡಿನಲ್ಲಿ ನಾಲ್ಕು ಕಿಲೋ ಮೀಟರ್ ನಡೆಯುವ ಜೊತೆಗೆ ಇನ್ನೆರಡು ಕಿಲೋ ಮೀಟರ್ ಮಾಮೂಲಿ ರಸ್ತೆಯಲ್ಲಿಯೇ ನಡೆಯಬೇಕು. ಹೀಗಾಗಿ ಬಸವನಹಳ್ಳಿ ಶಾಲೆಗೆ ಹೋಗುತ್ತಿದ್ದ 12 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಷ್ಟೇ ಬಾಕಿ, ಮತ್ತೆ ಆ ಶಾಲೆಯತ್ತ ತಿರುಗಿ ನೋಡಿಲ್ಲ. ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದೆ ಬರುತ್ತಿಲ್ಲ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳು ಆಗಿರುವುದರಿಂದ ಆಟೋಗಳಿಗೆ ಹಣ ನೀಡಿ ಶಾಲೆಗೆ ಕಳುಹಿಸುವುದಿಲ್ಲ. ಸಾರಿಗೆ ಸೌಲಭ್ಯದ ಕೊರತೆಯಿಂದ ಆ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುವಂತೆ ಆಗಿರುವುದು ವಿಪರ್ಯಾಸದ ಸಂಗತಿ.