
ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
ಹೊರ ಜಗತ್ತಿಗೆ ಡಾನ್ ಆಗಿದ್ದ ಜೆಜೆ ನಗರದ ರೌಡಿಶೀಟರ್ ಸೈಯದ್ ಅಸ್ಗರ್, ಎರಡನೇ ಮದುವೆಯಾದ ಕಾರಣಕ್ಕೆ ಮೊದಲ ಪತ್ನಿ ರಿಜ್ವಾನಾಳಿಂದ ಮಚ್ಚಿನೇಟು ತಿಂದಿದ್ದಾನೆ. ಜೀವಭಯದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, 'ನನ್ನ ಹೆಂಡತಿಯಿಂದ ನನ್ನನ್ನು ಕಾಪಾಡಿ' ಎಂದು ಪೊಲೀಸರ ಮುಂದೆ ಗೋಗರೆದಿದ್ದಾನೆ.
ಬೆಂಗಳೂರು (ಜ.07): ಹೊರಗಿನ ಜಗತ್ತಿಗೆ ತಾನು ದೊಡ್ಡ ಡಾನ್, ಹತ್ತಾರು ಕೇಸ್‌ಗಳ ಸರದಾರ ಎಂದು ಫೋಸ್ ಕೊಡುತ್ತಿದ್ದ ರೌಡಿಶೀಟರ್ ಒಬ್ಬ, ಈಗ ತನ್ನ ಪತ್ನಿಯ ಮಚ್ಚಿನೇಟಿಗೆ ಬೆದರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. 'ನನ್ನ ಹೆಂಡತಿಯಿಂದ ನನ್ನನ್ನು ಕಾಪಾಡಿ' ಎಂದು ಈ ರೌಡಿ ಪೊಲೀಸರ ಮುಂದೆ ಗೋಗರೆಯುತ್ತಿರುವುದು ಈಗ ನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ಹಿನ್ನೆಲೆ:
ಜೆಜೆ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಸೈಯದ್ ಅಸ್ಗರ್ ಈ ಕಥೆಯ ನಾಯಕ. ಚುನಾವಣೆ ಇರಲಿ, ಹಬ್ಬವಿರಲಿ ಪೊಲೀಸರು ಮೊದಲು ಈತನನ್ನೇ ಕರೆಸಿ ವಾರ್ನಿಂಗ್ ನೀಡಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದರು. ಹತ್ತು ದಿನಗಳ ಹಿಂದಷ್ಟೇ ಬೇಲ್ ಮೇಲೆ ಹೊರಬಂದಿದ್ದ ಈ ರೌಡಿಗೆ ತನ್ನ ಮೊದಲ ಪತ್ನಿ ರಿಜ್ವಾನಾ ಲೇಡಿ ಡಾನ್ ರೂಪದಲ್ಲಿ ದರ್ಶನ ನೀಡಿದ್ದಾಳೆ.
ಇಬ್ಬರ ಹೆಂಡಿರ ಪಾಪದ ಗಂಡ:
ಅಸ್ಗರ್ ಮೊದಲ ಪತ್ನಿ ರಿಜ್ವಾನಾಳನ್ನು ಬಿಟ್ಟು ನಗ್ಮಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಮೊದಲ ಪತ್ನಿ, ಎರಡನೇ ಪತ್ನಿ ಮತ್ತು ಆಕೆಯ ಕುಟುಂಬದ ಮೇಲೆ ಸದಾ ದಾಳಿ ಮಾಡುತ್ತಿದ್ದಳು. ಪತ್ನಿಯ ಆರ್ಭಟಕ್ಕೆ ಹೆದರಿ ಅಸ್ಗರ್ ಆಕೆಯ ಮನೆಗೆ ಹೋಗುವುದನ್ನೇ ನಿಲ್ಲಿಸಿದ್ದ. ಆದರೆ, ಮೊನ್ನೆ ಮಗನ ಕೈಯಲ್ಲಿ ಫೋನ್ ಮಾಡಿಸಿ "ಅಪ್ಪಾ ಮನೆಗೆ ಬಾ" ಎಂದು ಕರೆಸಿಕೊಂಡ ರಿಜ್ವಾನಾ, ಅಸ್ಗರ್ ಮನೆಗೆ ಕಾಲಿಡುತ್ತಿದ್ದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾಳೆ.
ಠಾಣೆಯ ಮುಂದೆ ರೌಡಿಯ ಆರ್ತನಾದ
ಮಚ್ಚಿನೇಟಿನಿಂದ ತಲೆ ಮತ್ತು ಮುಖದ ಭಾಗದಲ್ಲಿ ಗಾಯಗೊಂಡ ಅಸ್ಗರ್, ಎರಡನೇ ಪತ್ನಿಯೊಂದಿಗೆ ಜೆಜೆ ನಗರ ಠಾಣೆಗೆ ಬಂದು ರಕ್ಷಣೆ ಕೋರಿದ್ದಾನೆ. "ಹೊರಗಿನವರು ಅಟ್ಯಾಕ್ ಮಾಡಿದ್ರೆ ನೋಡಿಕೊಳ್ಳುತ್ತಿದ್ದೆ, ಆದ್ರೆ ಸ್ವಂತ ಹೆಂಡತಿಯೇ ಮಚ್ಚು ಹಿಡಿದು ಅಟ್ಯಾಕ್ ಮಾಡಿದ್ರೆ ನಾನು ಎಲ್ಲಿಗೆ ಹೋಗಲಿ?" ಎನ್ನುವುದು ಈ ರೌಡಿಯ ಅಳಲು.
ಇತ್ತ ಎರಡನೇ ಹೆಂಡತಿ 'ಮೂರು ದಿನ ಅಲ್ಲಿರಲಿ, ಮೂರು ದಿನ ಇಲ್ಲಿರಲಿ' ಎಂದು ಸಂಧಾನಕ್ಕೆ ಮುಂದಾಗಿದ್ದರೆ, ಮೊದಲ ಪತ್ನಿ ಮಾತ್ರ 'ಆಕೆಯನ್ನು ಬಿಟ್ಟು ಬರಲೇಬೇಕು, ಇಲ್ಲದಿದ್ದರೆ ತಲೆ ಕಡಿಯುವುದು ಗ್ಯಾರಂಟಿ' ಎಂದು ಆವಾಜ್ ಹಾಕಿದ್ದಾಳೆ. ರೌಡಿಶೀಟರ್ ಒಬ್ಬ ಪತ್ನಿಯ ಹೊಡೆತಕ್ಕೆ ಬೆದರಿ ಆಸ್ಪತ್ರೆ ಸೇರಿರುವುದು ವಿಚಿತ್ರವಾದರೂ ಸತ್ಯ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.