Peenya Flyover Mess: ಕೇವಲ 12 ವರ್ಷಕ್ಕೆ ಇದೆಂಥಾ ದುಸ್ಥಿತಿ: ಡೆಮಾಲಿಷ್‌ ಆಗುತ್ತಾ ಫ್ಲೈಓವರ್?

*ಸದನದಲ್ಲಿ ಬೆಂಗಳೂರಿನ ಪೀಣ್ಯ ಫ್ಲೈಓವರ್ ಧ್ವಂಸದ ಬಗ್ಗೆ ಸಿಎಂ ಮಾತು 
*ಲೋಡ್‌ ಪರೀಕ್ಷೆ ವೇಳೆ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಎಂಜಿನಿಯರ್‌ಗಳಿಂದ ವರದಿ
*ದುರಸ್ತಿ ಕಾರ್ಯ ಪೂರ್ಣಗೊಂಡರೂ ಸಂಚಾರಕ್ಕೆ ಅವಕಾಶ ನೀಡಿಲ್ಲ

First Published Feb 17, 2022, 9:24 AM IST | Last Updated Feb 17, 2022, 9:28 AM IST

ಬೆಂಗಳೂರು(ಫೆ.16): ತುಮಕೂರು ರಸ್ತೆ ಮೇಲ್ಸೇತುವೆಯ(Flyover) ಎರಡು ಪಿಲ್ಲರ್‌ಗಳ ನಡುವಿನ ಕೇಬಲ್‌ ದುರಸ್ತಿಗೊಂಡಿದೆ. ಆದರೆ, ದುರಸ್ತಿ ಕಾಮಗಾರಿ ಮುಗಿದಿದ್ದರೂ ಲೋಡ್‌ ಪರೀಕ್ಷೆ ವೇಳೆ ವಾಹನ ಸಂಚಾರ ಸುರಕ್ಷಿತವಲ್ಲ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ವಾಹನಗಳಿಗೆ ಅವಕಾಶ ನೀಡಿಲ್ಲ. ಯಾವುದಾದರೂ ಅನಾಹುತ ಉಂಟಾದರೆ ಯಾರು ಹೊಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪ್ರಶ್ನಿಸಿದ್ದಾರೆ.

ಕಳಪೆ ಕಾಮಗಾರಿಯಿಂದಲೇ ಎರಡು ಪಿಲ್ಲರ್‌ ನಡುವಿನ ಭಾಗಕ್ಕೆ ಸಮಸ್ಯೆಯಾಗಿದೆ. ಅದನ್ನು ಹೊಸದಾಗಿಯೇ ಮಾಡಬೇಕು ಎಂದು ಎಂಜಿನಿಯರ್‌ಗಳು ಹೇಳುತ್ತಿದ್ದಾರೆ. ತಾತ್ಕಾಲಿಕವಾಗಿ ಲಘು ವಾಹನಗಳಿಗಾದರೂ ಅವಕಾಶ ನೀಡುವಂತೆ ಕೇಂದ್ರ ಹೆದ್ದಾರಿ ಖಾತೆ ಸಚಿವರಿಗೆ ಪತ್ರ ಬರೆದಿದ್ದೇನೆ. ಎರಡು ದಿನದೊಳಗೆ ಅಂತಿಮ ತೀರ್ಮಾನ ಬರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bengaluru: ಪೀಣ್ಯ ಫ್ಲೈಓವರ್‌ ಟೆಸ್ಟ್‌ಗೇ 9 ತಿಂಗಳು ಬೇಕು..!

 ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(National Highway Authority) ವ್ಯಾಪ್ತಿಗೆ ಬರುತ್ತದೆ. ಕಳಪೆ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಯಿಂದ ಲಕ್ಷಾಂತರ ಮಂದಿ ನರಳುತ್ತಿದ್ದಾರೆ. ರಿಪೇರಿ ಮುಗಿದ ಮೇಲೆ ಲೋಡ್‌ ಟೆಸ್ಟಿಂಗ್‌ ನಡೆಸಿದ್ದು, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು, ಐಐಎಸ್ಸಿ ಎಂಜಿನಿಯರ್‌ಗಳು ಪರೀಕ್ಷೆ ನಡೆಸಿದ್ದಾರೆ. 102-103 ಪಿಲ್ಲರ್‌ ನಡುವಿನ ಕೇಬಲ್‌ ಹೆಚ್ಚು ಗಾತ್ರದ ವಾಹನ ಸಂಚರಿಸಿದರೆ ಈಗಲೂ ಬಕಲ್‌ ಆಗುತ್ತಿದೆ. ಯಾವುದಾದರೂ ಅನಾಹುತ ಆದರೆ ಯಾರು ಹೊಣೆ ಎಂಬ ಕಾರಣಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.