ಬಿಡಿಎ ಯಡವಟ್ಟಿಗೆ ಸೈಟ್ ಮಾಲೀಕ ಕಂಗಾಲು: ಸೈಟ್ ಮಾರಲಾಗದೆ, ಮನೆ ಕಟ್ಟಲಾಗದೆ ಪರದಾಟ !
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಸೈಟ್ ಖರೀದಿ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದ್ರೆ ಅದೇ ಖುಷಿಯಲ್ಲಿ ಖರೀದಿ ಮಾಡಿದ ಸೈಟ್ನಿಂದಲೇ ಈಗ ನೆಮ್ಮದಿ ಹಾಳಾಗಿದೆ. ಸೈಟ್ ಸಮಸ್ಯೆ ಬಗೆಹರಿಸುವಂತೆ ಪ್ರತಿನಿತ್ಯ ಬಿಡಿಎ ಬಾಗಿಲಿಗೆ ಅಲೆಯುವಂತಾಗಿದೆ.
ಈಶ್ವರ್ ಪ್ರಸಾದ್ ಎಂಬುವವರು 2002ರಲ್ಲಿ ಬಿಟಿಎಂ ಲೇಔಟ್ 6ನೇ ಹಂತದಲ್ಲಿ ಇವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 30/40 ಅಳತೆಯ ಸೈಟ್ ಹಂಚಿಕೆ ಮಾಡಿತ್ತು. 2012ರಲ್ಲಿ ಅದನ್ನ ಸರ್ಕಾರ ಡಿನೋಟಿಫೈ ಮಾಡಿ ಸೈಟ್ ಮಾಲೀಕರಿಗೆ ಬದಲಿ ನಿವೇಶನ ಹಂಚಿಕೆ ಮಾಡಿದೆ. ಆದ್ರೆ ಬಿಡಿಎ(BDA) ಹಂಚಿಕೆ ಮಾಡಿದ ಬದಲಿ ನಿವೇಶನವು ಕೂಡ ಈಶ್ವರ್ ಪ್ರಸಾದ್‌ಗೆ ಸಮಸ್ಯೆ ತಂದಿದೆ. ಬಿಡಿಎ ಏನೋ ಬದಲಿ ನಿವೇಶನ ನೀಡಿ ಕೈತೊಳೆದುಕೊಂಡಿದೆ. ಆದ್ರೆ ಆ ಜಾಗದ ಮೂಲ ಕೆದಿಕಿದಾಗಲೇ ಗೊತ್ತಾಗಿದ್ದು, ಅದು ರೆವಿನ್ಯೂ ಜಾಗ ಎಂದು. ಈ ಜಾಗದ ಮೂಲ ಮಾಲೀಕರು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದು, ನಮ್ಮ ಸಮಸ್ಯೆಯನ್ನ ಅಧಿಕಾರಿಗಳು ಬಗೆಹರಿಸುತ್ತಿಲ್ಲ ಎಂದು ಮೂಲ ಮಾಲೀಕರು ಆರೋಪಿಸಿದ್ದಾರೆ. ಇತ್ತ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲಿಟಿಗೇಷನ್ ಸೈಟ್ ಪಡೆದ ಈಶ್ವರ್ ಪ್ರಸಾದ್.. ಹಣವೂ ಇಲ್ಲದೆ, ಸೈಟ್ ಮಾರಲಾಗದೆ, ಮನೆ ಕಟ್ಟಲಾಗದೆ ಪರದಾಡ್ತಿದ್ದಾರೆ. ಬೆಂಗಳೂರು(Bengaluru) ದಕ್ಷಿಣ ತಾಲೂಕು ದೇವರಚಿಕ್ಕನಹಳ್ಳಿ ಸರ್ವೆ ನಂ 35/2 ರಲ್ಲಿ ಈಶ್ವರ್ ಪ್ರಸಾದ್ ಹಾಗೂ ಸುಂದರ್ ಎಂಬುವರಿಗೆ ಬಿಡಿಎ ಬದಲಿ ನಿವೇಶನ ನೀಡಿದೆ. ಬದಲಿ ನಿವೇಶನದಲ್ಲಿ ಮನೆ ಕಟ್ಟಲು ಸಾಧ್ಯವಾಗ್ತಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಸತತವಾಗಿ ಬಿಡಿಎಗೆ ಅಲೆದ್ರು ಪ್ರಕರಣ ಬಗೆಹರಿಸಲು ಅಧಿಕಾರಿಗಳು ಮುಂದಾಗಿಲ್ಲ. ಈ ಬಗ್ಗೆ ಹಿಂದಿನ ಬಿಡಿಎ ಆಯುಕ್ತರ ಗಮನಕ್ಕೆ ತಂದಿದ್ರೂ ಕೂಡ ಸಮಸ್ಯೆ ಬಗೆಹರಿಸಿಲ್ಲ. ಈಗ ಹೊಸದಾಗಿ ನೇಮಕವಾಗಿರೋ ಬಿಡಿಎ ಆಯುಕ್ತರಾದ್ರು ತಮಗೆ ನ್ಯಾಯ ಕೊಡಿಸಲಿ ಎಂದು ಈಶ್ವರ್ ಪ್ರಸಾದ್ ಮನವಿ ಮಾಡ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಬುರ್ಖಾ ವೇಷದಲ್ಲಿ ಮಹಿಳಾ ಉದ್ಯಮಿ ಕಿಡ್ನಾಪ್: ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್!