
News Hour: ದೇಶಾದ್ಯಂತ ಮುಂದುವರೆದ ಮಹಾಮಳೆ ಆರ್ಭಟ: ಅಮರನಾಥ ಯಾತ್ರೆ ಪುನಾರಂಭ
Rain Updates: ದೇಶಾದ್ಯಂತ ಮಹಾಮಳೆ ಆರ್ಭಟಿಸುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ದೆಹಲಿಯಲ್ಲಿ ವರುಣದೇವನ ರುದ್ರ ನರ್ತನ ಶುರುವಾಗಿದೆ
ನವದೆಹಲಿ (ಜು. 11): ದೇಶಾದ್ಯಂತ ಮಹಾಮಳೆ ಆರ್ಭಟಿಸುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ದೆಹಲಿಯಲ್ಲಿ ವರುಣದೇವನ ರುದ್ರ ನರ್ತನ ಶುರುವಾಗಿದೆ. ಮೇಘಸ್ಫೋಟದಿಂದಾಗಿ ಭಾಗಶಃ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದಿನಿಂದ ಮತ್ತೆ ಶುರುವಾಗಿದೆ. ಮಧ್ಯಾಹ್ನದ ವೇಳೆಗೆ ಪಂಚತಾರ್ಣಿ ಕಡೆಯಿಂದ ಯಾತ್ರಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದ 4,026 ಮಂದಿ ಅಮರನಾಥದತ್ತ ಮುಖ ಮಾಡಿದ್ದಾರೆ.
ಸಿಆರ್‌ಪಿಎಫ್, ಭದ್ರತಾ ಪಡೆಗಳ 110 ವಾಹನಗಳೊಂದಿಗೆ 4,026 ಯಾತ್ರಿಗಳಿರುವ 12ನೇ ಬ್ಯಾಚ್ ಭಗವತಿ ನಗರ ಯಾತ್ರಿ ನಿವಾಸದಿಂದ ಹೊರಟಿದ್ದಾರೆ. 3,192 ಪುರುಷರು, 641 ಮಹಿಳೆಯರು, 13 ಮಕ್ಕಳು, 174 ಸಾಧುಗಳು ಮತ್ತು ಆರು ಮಂದಿ ಸಾಧ್ವಿಗಳನ್ನು ಈ ಗುಂಪು ಒಳಗೊಂಡಿದೆ.
ಇದನ್ನೂ ನೋಡಿ: ಮೇಘಸ್ಫೋಟ ನಂತರ ಈಗ ಹೇಗಿದೆ ಅಮರನಾಥ? ಇಲ್ಲಿದೆ ಬಾಲ್ಟಾಲ್ ಗ್ರೌಂಡ್ ರಿಪೋರ್ಟ್
ಇನ್ನು ಗುಜರಾತ್‌ನಲ್ಲಿ ಮಹಾಮಳೆ ಆರ್ಭಟಿಸುತ್ತಿದೆ. ದಕ್ಷಿಣ ಗುಜರಾತ್‌ನ ವಲ್ಸಾದ್, ನವಸಾರಿ, ತಾಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಪಾಲ್ಡಿ, ವಸಾನ ಮತ್ತು ಎಲ್ಲಿಸ್ ನದಿ ಪಾತ್ರದಲ್ಲಿ ಮಳೆ ಅಬ್ಬರ ಜೋರಾಗಿದೆ. ಗುಜರಾತ್‌ನ ಖೇಡಾ ಜಿಲ್ಲೆಯ ನಾಡಿಯಾಡ್‌ನ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು ಹಲವರನ್ನು ಸ್ಥಳಾಂತರ ಮಾಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆ ಚರ್ಚೆ ನಡೆಸಿರುವ ಮೋದಿ ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲೂ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಉಲ್ಲಾಸ್, ಸಾವಿತ್ರಿ, ಪಾತಾಳಗಂಗಾ, ಅಂಬಾ ಮತ್ತು ಗರ್ಹಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ದೆಹಲಿಯಲ್ಲೂ ಮಾನ್ಸೂನ್ ಮಳೆ ಆರಂಭವಾಗಿದೆ. ಮುಂದಿನ ಐದು ದಿನಗಳ ಕಾಲ ದೇಶಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೇರಳ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರದಲ್ಲಿ ಜುಲೈ 15ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.