ಅಧ್ಯಾತ್ಮ, ಪ್ರವಾಸ ಸ್ಮಾರ್ಟ್ ಸಿಟಿ ಸ್ಪರ್ಶ, ಮೋದಿ ಕಲ್ಪನೆಯ ಅಯೋಧ್ಯಾ ರಾಮಮಂದಿರವಿದು..!
- ಶ್ರೀರಾಮ ಮಾಡಿದ ರೀತಿ ಅಯೋಧ್ಯೆ ಅಭಿವೃದ್ಧಿಪಡಿಸಿ
- ಒಮ್ಮೆ ಅಲ್ಲಿಗೆ ಹೋಗಬೇಕು ಅಂತ ಜನರಿಗೆ ಅನ್ನಿಸಬೇಕು
- ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಧಾನಿ ಮೋದಿ ಸೂಚನೆ
ನವದೆಹಲಿ (ಜೂ. 28): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಅಭಿವೃದ್ಧಿ ಯೋಜನೆಯ ಪ್ರಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ. ‘ನಮ್ಮ ಅತ್ಯುತ್ತಮ ಸಂಪ್ರದಾಯಗಳು ಹಾಗೂ ಅಭಿವೃದ್ಧಿ ರೂಪಾಂತರಗಳನ್ನು ಅಯೋಧ್ಯೆ ಪ್ರತಿಪಾದಿಸುವಂತಿರಬೇಕು. ಅಯೋಧ್ಯೆಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಎಂದು ಯುವಪೀಳಿಗೆಗೆ ಉತ್ಕಟ ಭಾವ ಮೂಡುವಂತಿರಬೇಕು’ಎಂದು ಸಲಹೆ ನೀಡಿದ್ದಾರೆ.
'ಶ್ರೀರಾಮ ಯಾವ ರೀತಿ ಜನರನ್ನು ಒಗ್ಗೂಡಿಸಿದನೋ, ಅದೇ ರೀತಿ ಎಲ್ಲರ ಸಹಭಾಗಿತ್ವದಲ್ಲಿ ಅಯೋಧ್ಯೆ ಅಭಿವೃದ್ಧಿಯಾಗಬೇಕು. ಇದರಲ್ಲಿ ಯುವಕರ ಕೌಶಲ ಬಳಸಿಕೊಳ್ಳಬೇಕು. ಆಧ್ಯಾತ್ಮಿಕ ಕೇಂದ್ರ, ಜಾಗತಿಕ ಪ್ರವಾಸೋದ್ಯಮ ಹಬ್ ಹಾಗೂ ಸುಸ್ಥಿರ ಸ್ಮಾರ್ಟ್ ಸಿಟಿಯ ಅಂಶಗಳನ್ನು ಅಯೋಧ್ಯೆ ಒಳಗೊಂಡಿರಬೇಕು' ಎಂದಿದ್ದಾರೆ.