ಒಂದು ರಾಷ್ಟ್ರ, ಒಂದು ಚುನಾವಣೆ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಭಾರತದಾದ್ಯಂತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿಯನ್ನು ಹೊಂದಿರುವ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಸೂದೆಯನ್ನು ಜಂಟಿ ಸದನ ಸಮಿತಿಯ ನಿಷ್ಕರ್ಷೆಗೆ ಒಳಪಡಿಸುವ ಸಾಧ್ಯತೆಯಿದೆ.
ಭಾರತದಾದ್ಯಂತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿಯನ್ನು ಹೊಂದಿರುವ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಗೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಲೋಕಸಭೆ, ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವ ‘ಒಂದು ದೇಶ ಒಂದು ಚುನಾವಣೆ’ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಮಂಡನೆ ಬಳಿಕ ವಿಧೇಯಕವನ್ನು ಜಂಟಿ ಸದನ ಸಮಿತಿ ನಿಷ್ಕರ್ಷೆಗೆ ಒಳಪಡಿಸುವ ಸಂಭವವಿದೆ.
ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆ ಅಂಗೀಕರಿಸುವ ಉದ್ದೇಶವಿರುವ ಕಾರಣ ತಕ್ಷಣ ಇದನ್ನು ಅಂಗೀಕರಿಸುವುದಿಲ್ಲ. ಬದಲಾಗಿ, ವಕ್ಫ್ ತಿದ್ದುಪಡಿ ಮಸೂದೆಯಂತೆಯೇ ಇದನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸಿ ಅಲ್ಲಿ ಸರ್ವಸಮ್ಮತಿ ಪಡೆಯಲು ಯತ್ನಿಸಲಾಗುತ್ತದೆ. ರಾಜ್ಯಗಳ ವಿಧಾನಸಭೆ ಸ್ಪೀಕರ್‌ಗಳು, ಜನಪ್ರತಿನಧಿಗಳು, ಬುದ್ಧಿಜೀವಿಗಳು, ತಜ್ಞರು ಮತ್ತು ನಾಗರಿಕ ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನೂ ಆಲಿಸುವ ಉದ್ದೇಶ ಸರ್ಕಾರಕ್ಕೆಇದೆ ಎಂದು ಮೂಲಗಳು ಹೇಳಿವೆ.
ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಏಕಕಾಲಕ್ಕೆ ಎಲ್ಲ ಚುನಾವಣೆ ನಡೆಸುವುದು ಕೂಡ ಒಂದಾಗಿತ್ತು. ಪದೇ ಪದೇ ಚುನಾವಣೆ ನಡೆಯುವ ಕಾರಣ ಎದುರಾಗುವ ನೀತಿ ಸಂಹಿತೆಗಳಿಂದ ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಹಾಗೂ ನಿರಂತರ ಚುನಾವಣೆಗಳಿಂದ ಅನಗತ್ಯ ಖರ್ಚಾಗುತ್ತದೆ. ಒಟ್ಟಿಗೇ ಚುನಾವಣೆ ನಡೆದರೆ ಖರ್ಚು ತಗ್ಗುತ್ತದೆ ಎಂಬ ಕಾರಣಕ್ಕೆ ಏಕ ಚುನಾವಣೆ ಅಗತ್ಯ ಎಂದು ಬಿಜೆಪಿ ಒತ್ತಿ ಹೇಳಿತ್ತು.