ಕೊಡಗು: ಬೈಗುಳದ ಹಬ್ಬ, ಕಾಡಿನ ಮಕ್ಕಳು ಆಚರಣೆ ಮಾಡುವ ವಿಶಿಷ್ಟ ಹಬ್ಬ
- ಕಾಡಿನ ಮಕ್ಕಳು ಆಚರಣೆ ಮಾಡುವ ವಿಶಿಷ್ಟ ಹಬ್ಬ
- ಹಣ ಬೇಡುವ ಬೇಡು ಹಬ್ಬ ಎಂದೂ ಪ್ರಖ್ಯಾತಿ
- ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಆಚರಣೆ
ಕೊಡಗು (ಮೇ. 30): ಜಿಲ್ಲೆಯಲ್ಲಿ ಆಚರಣೆಯಾಗುವ ಗಿರಿಜನರ ಬೈಗುಳುದ ಹಬ್ಬ, ಗಿರಿಜನರು ಹಣ ಬೇಡುವ ಬೇಡು ಹಬ್ಬ, ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಆಚರಣೆ ವಿವಿಧ ವೇಷಭೂಷಣ ಹಾಕಿ ಕುಣಿಯುತ್ತಿರುವ ಗಿರಿಜನರು. ಕೈಯಲ್ಲಿ ಬುರುಡೆ,ಬಾಯಲ್ಲಿ ಕುಂಡೆ ಹಾಡು, ತಲೆಯಲ್ಲಿ ಮದ್ಯದ ಅಮಲು.
ಇದು ಕೊಡಗು (Kodagu) ಜಿಲ್ಲೆಯಲ್ಲಿ ಕಂಡು ಬರುವ ಗಿರಿಜನರ ರೋಮಾಂಚನಕಾರಿಯಾದ ಕುಂಡೆ ಹಬ್ಬದ ದೃಶ್ಯ.ಕಷ್ಟಪಟ್ಟು ದುಡಿದು ಜೀವನ ಸಾಗಿಸುವ ಕಾಡಿನ ಮಕ್ಕಳು ಆಚರಣೆ ಮಾಡುವುದು ಇದೊಂದೆ ಹಬ್ಬ. ಇದು ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ನಡೆಯುವ ಶ್ರೀ ಅಯ್ಯಪ್ಪ -ಭದ್ರಕಾಳಿ ದೇವರ ಬೇಡು ಹಬ್ಬ. ಆದರೆ ಗಿರಿಜನರಲ್ಲಿ ಇದು ರಾಜ್ಯದಲ್ಲಿ ಕುಂಡೆ ಹಬ್ಬ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಯಿಂದಲೂ ಸಾವಿರಾರು ಗಿರಿಜನರು ಈ ಹಬ್ಬಕ್ಕೆ ಆಗಮಿಸುತ್ತಾರೆ. ಜಿಲ್ಲೆಯ ವಿವಿಧೆಡೆ ಎರಡು ದಿನಗಳ ಕಾಲ ಜನತೆಯಿಂದ ಹಣ ವಸೂಲಿ ಮಾಡುತ್ತಾರೆ. ಹಣ ನೀಡದಿದ್ದರೆ ಕೆಟ್ಟ ಕೆಟ್ಟ ಬೈಗುಳದ ಗಿಫ್ಟ್ ಸಿಗುತ್ತದೆ. ಆದ್ದರಿಂದ ಇದು ಬೈಗುಳದ ಹಬ್ಬ ಎಂದು ನಾಮಾಂಕಿತವಾಗಿದೆ. ಹಲವು ಬಗೆ ಬಗೆಯ ಕುಂಡೆ ಹಾಡುಗಳು ಈ ಗಿರಿಜನರ ಬಾಯಲ್ಲಿ ಸದಾ ಜಿನುಗುತ್ತಿರುತ್ತದೆ. ಕೊನೆಗೆ ಎಲ್ಲಾ ಗಿರಿಜನರು ಬಂದು ಸೇರುವುದು ಇದೇ ಅಯ್ಯಪ್ಪ-ಭದ್ರಕಾಳಿ ದೇವಾಲಯದಲ್ಲಿ. ತಾವು ವಸೂಲಿ ಮಾಡಿದರಲ್ಲಿ ಸ್ವಲ್ಪ ಹಣವನ್ನು ದೇವರಿಗೆ ಭಂಡಾರ ರೂಪದಲ್ಲಿ ಒಪ್ಪಿಸಿ ಉಳಿದ ಹಣವನ್ನು ಖರ್ಚು ಮಾಡುತ್ತಾರೆ.
ಇನ್ನೂ ಈ ಗಿರಿಜನರು ಹೆಚ್ಚಾಗಿ ಬೈಯುವುದು ಅಯ್ಯಪ್ಪ ದೇವರನ್ನು.ಇದಕ್ಕೆ ಕಾರಣ ಗಿರಿಜನರು ಶ್ರೀ ಅಯ್ಯಪ್ಪ ದೇವರ ಭಕ್ತರು.ಪುರಾತನ ಕಾಲದಲ್ಲಿ ಗಿರಿಜನರು ಅಯ್ಯಪ್ಪ ದೇವರೊಂದಿಗೆ ಕಾಡಿಗೆ ತೆರಳಿದಾಗ ಅಲ್ಲಿ ಭದ್ರಕಾಳಿ ದೇವರ ದರ್ಶನವಾಗುತ್ತದೆ. ಈ ಸಂದರ್ಭ ಅಯ್ಯಪ್ಪ ದೇವರು ಗಿರಿಜನರನ್ನು ಕಾಡಿನಲ್ಲಿ ಬಿಟ್ಟು ಭದ್ರಕಾಳಿ ದೇವರೊಂದಿಗೆ ಹೊರಟುಹೋಗುತ್ತಾನೆ. ಈ ಸಂದರ್ಭ ಗಿರಿಜನರು ಅಯ್ಯಪ್ಪ ದೇವರನ್ನು ನಿಂದಿಸಲು ಪ್ರಾರಂಭ ಮಾಡಿದರು ಎಂಬುವುದು ಇತಿಹಾಸ. ಇನ್ನೂ ಈ ಉತ್ಸವವನ್ನು ಗ್ರಾಮಸ್ಥರು ಶ್ರದ್ದಾಭಕ್ತಿಯಿಂದ ಆಚರಣೆ ಮಾಡುತ್ತಾರೆ. ಒಂದು ಕಡೆ ಗಿರಿಜನರಿಗೆ ಬೈಗುಳದ ಹಬ್ಬವಾದರೆ ಗ್ರಾಮಸ್ಥರು ಭಕ್ತಿಯಿಂದ ಆಚರಣೆ ಮಾಡುವ ಬೇಡು ಹಬ್ಬ.