Asianet Suvarna News Asianet Suvarna News

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ ನಾಗ್: ಚಿತ್ರರಂಗದ ನೆನಪಿನ ಬುತ್ತಿ ಬಿಚ್ಚಿಟ್ಟ ಖ್ಯಾತ ನಟ

ಚಿತ್ರರಂಗದಲ್ಲಿ ಐದು ದಶಕಗಳನ್ನು ಕಳೆದ ಕನ್ನಡದ ಮೇರು ನಟ ಅನಂತ್‌ನಾಗ್‌ರಿಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಗೌರವ ಸಮರ್ಪಿಸಿದೆ. ಅನಂತ್‌ನಾಗ್‌ ಮತ್ತು ಗಾಯತ್ರಿ ಅನಂತ್‌ನಾಗ್‌ ದಂಪತಿಗೆ ಸನ್ಮಾನ ನಡೆಸುವ ಮೂಲಕ ಅಪರೂಪದ ದಂಪತಿಗೆ ಕೃತಜ್ಞತೆ ಸಲ್ಲಿಸಿದೆ. 

ಬೆಂಗಳೂರು (ಆ.14): ಚಿತ್ರರಂಗದಲ್ಲಿ ಐದು ದಶಕಗಳನ್ನು ಕಳೆದ ಕನ್ನಡದ ಮೇರು ನಟ ಅನಂತ್‌ನಾಗ್‌ರಿಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಗೌರವ ಸಮರ್ಪಿಸಿದೆ. ಅನಂತ್‌ನಾಗ್‌ ಮತ್ತು ಗಾಯತ್ರಿ ಅನಂತ್‌ನಾಗ್‌ ದಂಪತಿಗೆ ಸನ್ಮಾನ ನಡೆಸುವ ಮೂಲಕ ಅಪರೂಪದ ದಂಪತಿಗೆ ಕೃತಜ್ಞತೆ ಸಲ್ಲಿಸಿದೆ. ಭಾವಪೂರ್ಣವಾಗಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಖ್ಯಾತ ನಟ ರಮೇಶ್‌ ಅರವಿಂದ್‌ ಅವರು ಅನಂತ್‌ನಾಗ್‌ ಅವರ ಸಂದರ್ಶನ ನಡೆಸಿದರು. ವಿಭಿನ್ನ ಪ್ರಶ್ನೆಗಳ ಮೂಲಕ ಅನಂತ್‌ನಾಗ್‌ರ ಆಂತರ್ಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದರು. 

ಅನಂತ್‌ನಾಗ್‌ರನ್ನು ಹಾಡಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟಮೆರುಗನ್ನು ತಂದುಕೊಟ್ಟರು. ಸಂದರ್ಶನದಲ್ಲಿ ಮಾತನಾಡುತ್ತಾ ಅನಂತ್‌ನಾಗ್‌, ಅಧ್ಯಾತ್ಮಿಕ ವಾತಾವರಣದಲ್ಲಿ ಬಾಲ್ಯವನ್ನು ಕಳೆದೆ. ಅಲ್ಲಿಯೇ ಅಪರೂಪದ ವ್ಯಕ್ತಿಗಳನ್ನು ಇಮಿಟೇಟ್‌ ಮಾಡುತ್ತಿದ್ದೆ, ಅವರ ಮಿಮಿಕ್ರಿ ಮಾಡುತ್ತಿದ್ದೆ. ಮುಂದೆ ಮುಂಬೈಯಲ್ಲಿ ನಿಜ ಜೀವನಕ್ಕೆ ಎದುರುಗೊಂಡೆ. ಕಾಲೇಜಿನಲ್ಲಿ ಸರಿಯಾಗಿ ಓದದೆ ಟೀಕೆಗೆ ಒಳಗಾದೆ. ಆಗ ನನಗೆ ನಾಟಕಗಳು, ಪಾತ್ರಗಳು ಆನಂದಕೊಟ್ಟವು. ಅಲ್ಲಿಂದ ಇಲ್ಲಿಯವರೆಗೆ 50 ವರ್ಷ ಸಂದಿದೆ. ನಾನು ಎಲ್ಲವನ್ನೂ ಮಾಡಿದೆ ಎಂದರೆ ಅಹಂಕಾರ ಆಗುತ್ತದೆ. 

ಯಾವುದೇ ಒಂದು ಶಕ್ತಿ ನನ್ನಿಂದ ಇದನ್ನೆಲ್ಲಾ ಮಾಡಿಸಿತು ಎಂದು ಹೇಳುವುದೇ ಸರಿ. ನನ್ನ ಈ ಪ್ರಯಾಣದಲ್ಲಿ ಚಿತ್ರರಂಗದ ಮಂದಿ ಮತ್ತು ಪತ್ರಕರ್ತರೇ ನನ್ನ ಸ್ನೇಹಿತರು, ಸರಿದಾರಿ ತೋರಿ ಮುನ್ನಡೆಸಿದವರು ಎಂದರು. ರಾಘವೇಂದ್ರ ಚಿತ್ರವಾಣಿಯ ಕುರಿತು ಮಾತನಾಡಿದ ಅವರು, ನನ್ನ ಮತ್ತು ರಾಘವೇಂದ್ರ ಚಿತ್ರವಾಣಿ ಸಂಬಂಧ ಸುದೀರ್ಘವಾದದ್ದು. ಡಿವಿ ಸುಧೀಂದ್ರ ನನ್ನ ಈ ಪ್ರಯಾಣದ ಆರಂಭ ಕಾಲದಲ್ಲಿ ಇದ್ದರು. ಅವರ ನಿರ್ಮಾಣದ ಸಿನಿಮಾದಲ್ಲಿಯೂ ನಟಿಸಿದ್ದೇನೆ ಎಂದು ಹೇಳಿದರು. ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌, ಸುನಿಲ್‌ ಸುಧೀಂದ್ರ, ಡಿ.ಜಿ. ವಾಸುದೇವ ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Video Top Stories