ಧಾರವಾಡ; ವೇತನವೋ..ಯಾತನೆಯೋ.. 80 ರೂ. ಸ್ಕಾಲರ್‌ಶಿಪ್ ಬಂತು!
* ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿರೋ ಕಡಿಮೆ ಹಣ
* ಕಡಿಮೆ ಹಣ ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರೋ ವಿದ್ಯಾರ್ಥಿಗಳು
* ಹಣ ಸಂದಾವನೆ ಆಗಿರೋ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಿರೋ ಪ್ರಾಂಶುಪಾಲರು
ಧಾರವಾಡ(ಸೆ. 23) ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿರೋ ಕಡಿಮೆ ಹಣ, ಕಡಿಮೆ ಹಣ ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರೋ ವಿದ್ಯಾರ್ಥಿಗಳು; ಹಣ ಸಂದಾವನೆ ಆಗಿರೋ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಿರೋ ಪ್ರಾಂಶುಪಾಲರು...ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ.
ಹೌದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ ಅನ್ನೋ ಕಾರಣಕ್ಕಾಗಿ ಸರ್ಕಾರ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿದ್ಯಾರ್ಥಿಗಳು ಸ್ಕಾಲರ್ಶಿಪ್‌ಗಾಗಿ ಎಲ್ಲ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಾರೆ. ಎರಡೆರಡು ಬಾರಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಸಮಾಜ ಕಲ್ಯಾಣ ಇಲಾಖೆಗೆ ಆನ್ಲೈನ್ ಮೂಲಕ ಅಪ್ಲೋಡ್ ಮಾಡಿದ್ದಾರೆ. ಇದೀಗ ಎಸ್.ಎಸ್.ಪಿ(ಸ್ಟೂಡೆಂಟ್ ಸ್ಕಾಲರ್ಶಿಪ್ ಪೋರ್ಟಲ್) ಮೂಲಕ ವಿದ್ಯಾರ್ಥಿಗಳಿಗೆ ಸರ್ಕಾರದ ವಿದ್ಯಾರ್ಥಿ ವೇತನ ಜಮಾ ಆಗುತ್ತಿದ್ದು, ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿರೋ ಹಣವನ್ನು ಕಂಡು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
2019-20, 2020-21 ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಎಸ್.ಎಸ್.ಪಿ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಂದಾವನೆ ಮಾಡಿದೆ. ಪ್ರತಿ ವಿದ್ಯಾರ್ಥಿಗೆ 15 ಸಾವಿರ ರೂಪಾಯಿ ಜಮಾ ಆಗಬೇಕಾಗಿದ್ದ ಹಣ ಕೇವಲ 80 ರೂಪಾಯಿ, 260 ರೂಪಾಯಿಯಂತೆ ಜಮಾ ಆಗಿದೆ. 1000 ಹೆಚ್ಚು ವಿದ್ಯಾರ್ಥಿಗಳ ಖಾತೆಗೆ ಈ ರೀತಿಯ ಹಣ ಸಂದಾವನೆಯಾಗಿದ್ರೆ, ಉಳಿದ ವಿದ್ಯಾರ್ಥಿಗಳಿಗೆ ಹಣವೇ ಸಂದಾಯ ಆಗಿಲ್ಲ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಎಸ್.ಬಿ ಪಾಟೀಲ್ ಅವರನ್ನು ಕೇಳಿದ್ರೆ, ನಾವು ಎಲ್ಲ ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿ, ಹತ್ತು ಜನರ ತಂಡದೊಂದಿಗೆ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವ ಕೆಲಸ ಮಾಡಿದ್ದೇವೆ. ಆದ್ರೆ, ವಿದ್ಯಾರ್ಥಿಗಳ ಖಾತೆಗೆ ಕಡಿಮೆ ಹಣ ಜಮಾವಣೆ ಆಗಿರೋ ಬಗ್ಗೆ ಈಗಷ್ಟೇ ಮಾಹಿತಿ ಬಂದಿದೆ. ಇದರ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ ಅಂತಾರೆ.
ಇನ್ನೂ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೂ ಇದೇ ಸಮಸ್ಯೆ ಎದುರಾಗಿದೆ. ವಿವಿ ಹೊರತುಪಡಿಸಿ ಬೇರೆ ಬೇರೆ ಕಾಲೇಜು ವಿದ್ಯಾರ್ಥಿಗಳಿಗೆ 15 ಸಾವಿರಕ್ಕೂ ಹೆಚ್ಚು ಹಣ ಜಮಾ ಆಗಿದ್ದು, ಕೆಲವು ವಿದ್ಯಾರ್ಥಿಗಳಿಗೆ ಹಣವೇ ಸಿಕ್ಕಿಲ್ಲ. ಇದರ ನಡುವೆ ವಿದ್ಯಾರ್ಥಿ ವೇತನ ನೀಡುವ ಪೋರ್ಟಲ್ ಕೂಡ ಕಾರ್ಯ ಸ್ಥಗಿತಗೊಳಿಸಿದ್ದು, ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಆಗಿರುವ ಯಡವಟ್ಟನ್ನು ಸರಿಪಡಿಸಿ, ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಮುಂದಾಗುತ್ತದೆಯಾ? ಅನ್ನೋದನ್ನು ಕಾದು ನೋಡಬೇಕಿದೆ.