Drive Against Drug Menace: ಹೊಸ ವರ್ಷಕ್ಕೂ ಮುನ್ನ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸ್ ಸಮರ

* ಕಾಲೇಜು ವ್ಯಾಪ್ತಿ, ರೆಸಾರ್ಟ್‌ಗಳಲ್ಲಿ ಗಾಂಜಾ  ಭರ್ಜರಿಯಾಗಿ ಪೂರೈಕೆ

* ಜಿಲ್ಲಾ ಎಸ್ಪಿ ಡಾ. ಸುಮನಾ ಪೆನ್ನೇಕರ್ ಮಾರ್ಗದರ್ಶನದಲ್ಲಿ ಡ್ರೈವ್ 

* ಗಾಂಜಾ ಸೇವನೆ, ಪೂರೈಕೆ ಮಾಡೋರನ್ನು ಬಂಧಿಸುವ ಪ್ರಕ್ರಿಯೆ

* 2021ರಲ್ಲಿ  50 ಪ್ರಕರಣ ದಾಖಲಾಗಿದ್ದು,‌  ಸುಮಾರು 76 ಮಂದಿ ಬಂಧನ 

First Published Dec 17, 2021, 7:24 PM IST | Last Updated Dec 17, 2021, 7:24 PM IST

ಕಾರವಾರ (ಡಿ. 17)   ಉತ್ತರಕನ್ನಡ(Uttara Kannada) ಜಿಲ್ಲೆಯಲ್ಲಿ ಮಾದಕ ದ್ರವ್ಯ (Drugs)ಸಪ್ಲೈ ಹಾಗೂ ಸೇವನೆ ಒಂದು ಪೂರ್ಣ ವಿರಾಮ ಕಾಣದ ಸಮಸ್ಯೆ. ಪೊಲೀಸರು (Karnataka Police) ಹಲವರನ್ನು ಬಂಧಿಸಿ ಕಂಬಿಯ ಹಿಂದೆ ಅಟ್ಟಿದರೂ ಕಾಲೇಜು ವ್ಯಾಪ್ತಿ, ರೆಸಾರ್ಟ್‌ಗಳಲ್ಲಿ ಗಾಂಜಾ (Ganja)ಅಂತೂ ಭರ್ಜರಿಯಾಗಿ ಪೂರೈಕೆಯಾಗುತ್ತಿದೆ. ಈ ಕಾರಣದಿಂದ ಖಡಕ್ ಅಧಿಕಾರಿ ಎಂದು ಖ್ಯಾತಿ ಪಡೆದಿರುವ ಉತ್ತರಕನ್ನಡ ಜಿಲ್ಲಾ ಎಸ್ಪಿ ಡಾ. ಸುಮನಾ ಪೆನ್ನೇಕರ್ ಮಾರ್ಗದರ್ಶನದಲ್ಲಿ ಡ್ರೈವ್ ಪ್ರಾರಂಭಗೊಂಡಿದ್ದು, ಗಾಂಜಾ ಸೇವನೆ, ಪೂರೈಕೆ ಮಾಡೋರನ್ನು ಬಂಧಿಸುವ ಪ್ರಕ್ರಿಯೆ ಮುಂದುವರಿದಿದೆ.

Drugs Case : ಪ್ರೆಸ್ಟೀಜ್‌ ಗ್ರೂಪ್‌ನ ಉನ್ನತ ಅಧಿಕಾರಿಗೆ ಸಂಕಷ್ಟ

ಹೌದು, ಪ್ರವಾಸೋದ್ಯಮ ಕೇಂದ್ರವಾದ ಉತ್ತರಕನ್ನಡ ಜಿಲ್ಲೆಯಲ್ಲಿ ಮಾದಕದ್ರವ್ಯಗಳ ಪೂರೈಕೆ ಸದ್ದು ಕೂಡಾ ಅಷ್ಟೇ ಜೋರಾಗಿ ಕೇಳಿ ಬರುತ್ತಿದೆ. ಕಾರವಾರ, ಮುಂಡಗೋಡ, ಯಲ್ಲಾಪುರ, ಹಳಿಯಾಳ, ಹೊನ್ನಾವರ, ಗೋಕರ್ಣ, ದಾಂಡೇಲಿ, ಜೊಯ್ಡಾದಲ್ಲಂತೂ ಸೇವನೆ ಹಾಗೂ ಪೂರೈಕೆ ಭರ್ಜರಿಯಾಗಿ ನಡೆಯುತ್ತಿದೆ. ಹೋಂ ಸ್ಟೇ, ರೆಸಾರ್ಟ್‌ಗಳು ಹಾಗೂ ಕಾಲೇಜು ಪ್ರದೇಶಗಳಲ್ಲಂತೂ ಪೊಲೀಸರ ಕಣ್ಣು ತಪ್ಪಿಸಿ ಬೇಕಾಬಿಟ್ಟಿ ಪೂರೈಕೆಯಾಗ್ತಿದ್ದು, ಜಿಲ್ಲೆಯ ಯುವಕರು ಹಾಗೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವಂತಹ ಪ್ರವಾಸಿಗರಂತೂ ಇದಕ್ಕೆ ದಾಸರಾಗಿದ್ದಾರೆ.

ಇನ್ನು ವರ್ಷಾಂತ್ಯಕ್ಕೆ ಬೆರಳೆಣಿಕೆಯ ದಿನಗಳು ಇರೋದ್ರಿಂದ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡೋ ಪ್ರವಾಸಿಗರ ಸಂಖ್ಯೆಯೂ ಅಷ್ಟೇ ಹೆಚ್ಚು. ಈ ಸಮಯದಲ್ಲಿ ಮಾದಕ ದ್ರವ್ಯ, ಬಾಟಲಿಗಳ ಪೂರೈಕೆ ಭರ್ಜರಿಯಾಗಿ ನಡೆಯಲಿದ್ದು, ಇದಕ್ಕಾಗಿ ಹಲವಾರು ಪ್ರವಾಸಿಗರು ಕಾಯುತ್ತಿರುತ್ತಾರೆ. ಈ ಕಾರಣದಿಂದ ಉತ್ತರಕನ್ನಡ ಜಿಲ್ಲಾ ಎಸ್ಪಿ ಡಾ. ಸುಮನಾ ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡ್ರೈವ್ ಪ್ರಾರಂಭಗೊಂಡಿದ್ದು,  ಈಗಾಗಲೇ ಶಿರಸಿ ಹಾಗೂ ಕುಮಟಾದಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಹಲವು ಯುವಕರನ್ನು ಬಂಧಿಸಿದ್ದಾರೆ. 2021ರ ಸಾಲಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ 50 ಪ್ರಕರಣಗಳು ದಾಖಲಾಗಿದ್ದು,‌ ಇವುಗಳಲ್ಲಿ ಸುಮಾರು 76 ಮಂದಿಯನ್ನು ಬಂಧಿಸಲಾಗಿದೆ. ಹೆಚ್ಚಾಗಿ ಯುವಕರೇ ಮಾದಕ ದ್ರವ್ಯಗಳಿಗೆ ಬಲಿಯಾಗ್ತಿರೋದ್ರಿಂದ ಮಾದಕ ದ್ರವ್ಯಗಳ ಜಾಲವನ್ನು ಬುಡ ಸಮೇತ ಕಿತ್ತು ಹಾಕಿ ವಿದ್ಯಾರ್ಥಿಗಳನ್ನು‌ ರಕ್ಷಿಸಬೇಕೆಂದು ಆಗ್ರಹಿಸುತ್ತಿದ್ದಾರೆ ವಿದ್ಯಾರ್ಥಿ ಮುಖಂಡರು.