ನಂಜನಗೂಡು ಪಿಎಸ್‌ಐ ಪುತ್ರನ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ವೃದ್ಧ ಬಲಿ, ಅಧಿಕಾರಿ ಅಮಾನತ್ತಿಗೆ ಆಗ್ರಹ
ನಂಜನಗೂಡಿನ ಮಹಿಳಾ ಪಿಎಸ್ಐ ಯಾಸ್ಮಿನ್ ತಾಜ್ ಅವರ ಪುತ್ರನ ಪುಂಡಾಟಕ್ಕೆ ಅಮಾಯಕ ವೃದ್ಧವ್ಯಕ್ತಿ ಬಲಿಯಾಗಿದ್ದಾರೆ. ಕೂಡಲೇ ಪಿಎಸ್‌ಐ ಅಮಾನತ್ತುಗೊಳಿಸಿ ಬಂಧಿಸುವಂತೆ ಮೃತ ವ್ಯಕ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೈಸೂರು (ಸೆ.17): ನಂಜನಗೂಡಿನ ಮಹಿಳಾ ಪಿಎಸ್ಐ ಪುತ್ರನ ಪುಂಡಾಟಕ್ಕೆ ಅಮಾಯಕ ವೃದ್ಧವ್ಯಕ್ತಿ ಬಲಿಯಾಗಿದ್ದಾರೆ. ಈಗಾಗಲೇ ಬೈಕ್ ಕಳ್ಳತನ ಹಾಗೂ ವ್ಹೀಲಿಂಗ್ ಮಾಡಿದ ಆರೋಪದಡಿ ಜೈಲಿಗೆ ಕಳಿಸಿ ಬುದ್ಧಿ ಕಲಿಸುವಂತೆ ಎಫ್‌ಐಆರ್ ದಾಖಲಿಸಿದರೂ ಪಿಎಸ್‌ಐ ಮಗನೆಂಬ ಕಾರಣಕ್ಕೆ ಉಡಾಫೆ ಮಾಡಲಾಗಿತ್ತು. ಆದರೆ, ಈಗ ಪತ್ತದೇ ಬೈಕ್ ವ್ಹೀಲಿಂಗ್ ಮಾಡಿ ವೃದ್ಧನೊಬ್ಬನ ಸಾವಿಗೆ ಕಾರಣವಾದರೂ ಪುಂಡನನ್ನು ಬಂಧಿಸಿಲ್ಲ. ಹೀಗಾಗಿ, ನಮ್ಮ ತಂದೆಯ ಸಾವಿಗೆ ಕಾರಣವಾದ ಆರೋಪಿ ಸೇರಿದಂತೆ, ಮಗನ ವಿಚಾರಕ್ಕೆ ಉಡಾಫೆಯ ವರ್ತನೆ ತೋರುತ್ತಿರುವ ನಂಜನಗೂಡಿನ ಮಹಿಳಾ ಪಿಎಸ್ಐ ಯಾಸ್ಮಿನ್ ತಾಜ್ ಅವರನ್ನೂ ಬಂಧಿಸಿ ಜೈಲಿಗಟ್ಟಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ, ಮೃತ ವೃದ್ಧನ ಶವವನ್ನಿಟ್ಟು ಪ್ರತಿಭಟನೆ ಆರಂಭಿಸಿದ್ದಾರೆ. ನಾವು ಯಾವುದೇ ಕಾರಣಕ್ಕೂ ಶವ ತೆಗೆದುಕೊಂಡು ಹೋಗಲ್ಲ. ಪಿಎಸ್ಐ ಯಾಸ್ಮಿನ್ ತಾಜ್ ಅವರನ್ನೂ ಅಮಾನತ್ತು ಮಾಡಿ. ಜೊತೆಗೆ, ಯಾಸ್ಮಿತ್ ತಾಜ್ ಅವರನ್ನೂ ಬಂಧಿಸಬೇಕು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.