ಚಿಕನ್ ರೋಲ್ ಇಲ್ಲ ಅಂದಿದಕ್ಕೆ ಹೋಟೆಲ್‌ಗೆ ಬೆಂಕಿ ಇಟ್ಟ ದುರುಳರು
ಚಿಕನ್ ರೋಲ್ ಇಲ್ಲ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಕಿಡಿಗೇಡಿಗಳ ಗುಂಪೊಂದು ಹೊಟೇಲ್ ಸಿಬ್ಬಂದಿ ಜೊತೆಗೆ ಜಗಳ ಮಾಡಿರುವುದು ಮಾತ್ರವಲ್ಲದೆ ಅವರು ತಂಗುವ ಬಾಡಿಗೆ ಮನೆಯ ಕೊಠಡಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಡಿ.13): ಚಿಕನ್ ರೋಲ್ ಇಲ್ಲ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಕಿಡಿಗೇಡಿಗಳ ಗುಂಪೊಂದು ಹೊಟೇಲ್ ಸಿಬ್ಬಂದಿ ಜೊತೆಗೆ ಜಗಳ ಮಾಡಿರುವುದು ಮಾತ್ರವಲ್ಲದೆ ಅವರು ತಂಗುವ ಬಾಡಿಗೆ ಮನೆಯ ಕೊಠಡಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇವರಾಜ್ ಮತ್ತು ಗಣೇಶ ಎಂಬಾತನನ್ನು ಬಂಧಿಸಲಾಗಿದೆ. ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ. ತಡರಾತ್ರಿ ಚಿಕನ್ ರೋಲ್ ತಿನ್ನಲು ಅರೋಪಿಗಳು ಕುಮಾರ್ ಹೋಟೆಲ್ ಗೆ ಬಂದಿದ್ದರು. ಈ ವೇಳೆ ಹೊಟೇಲ್ ಮುಚ್ಚುವ ಸಮಯವಾಗಿತ್ತು. ಹೀಗಾಗಿ ಹೋಟೆಲ್ ಸಿಬ್ಬಂದಿಗಳು ಮುಚ್ಚುವ ಸಮಯವಾಗಿದೆ ಹೀಗಾಗಿ ಚಿಕನ್ ರೋಲ್ ಇಲ್ಲ ಎಂದಿದ್ದಾರೆ. ಈ ವೇಳೆ ದೇವರಾಜ್ ಮತ್ತು ಗಣೇಶ ಚಿಕನ್ ರೋಲ್ಗಾಗಿ ಜಗಳ ಮಾಡಿದ್ದಾರೆ. ಗಲಾಟೆ ವೇಳೆ ಕುಡಿದ ಅಮಲಿನಲ್ಲಿದ್ದ ಮೂವರನ್ನು ಹೊಟೇಲ್ ಸಿಬ್ಬಂದಿ ಥಳಿಸಿ ಕಳುಹಿಸಿದ್ದಾರೆ. ಇದಕ್ಕೆ ಕೆರಳಿದ ಆರೋಪಿಗಳು ಪೆಟ್ರೋಲ್ ಪಂಪ್ ಗೆ ಹೋಗಿ ಎಂಟು ಲೀಟರ್ ಪೆಟ್ರೋಲ್ ಖರೀದಿ ಮಾಡಿ ಹೋಟೆಲ್ ಪಕ್ಕವೇ ಇದ್ದ ಸಿಬ್ಬಂದಿಯ ಬಾಡಿಗೆ ಮನೆಗೆ ಬೆಂಕಿ ಇಟ್ಟಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.