Mangaluru: ಮಹಿಳೆ ಜೀವ ಉಳಿಸಿದ್ದ ಡ್ರೈವರ್‌ ವಿರುದ್ಧ ಕೇಸ್‌!

ಪಾದಚಾರಿ ಮಹಿಳೆಯನ್ನ ತನ್ನ ಚಾಣಾಕ್ಷತೆಯಿಂದ ರಕ್ಷಿಸಿ ಹೀರೋ ಆಗಿದ್ದ ಬಸ್‌ ಚಾಲಕನ ವಿರುದ್ಧ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

First Published Jun 22, 2023, 5:22 PM IST | Last Updated Jun 22, 2023, 5:22 PM IST

ಉಳ್ಳಾಲ (ಜೂ.22): ಪಾದಚಾರಿ ಮಹಿಳೆಯನ್ನ ತನ್ನ ಚಾಣಾಕ್ಷತೆಯಿಂದ ರಕ್ಷಿಸಿ ಹೀರೋ ಆಗಿದ್ದ ಬಸ್‌ ಚಾಲಕನ ವಿರುದ್ಧ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು-ಮಂಜನಾಡಿ-ತೌಡುಗೋಳಿ ಮಾರ್ಗವಾಗಿ ಮುಡಿಪು ಕಡೆಗೆ ಸಂಚರಿಸುವ ಖಾಸಗಿ ಬಸ್ಸು ವೇಗವಾಗಿ ನರಿಂಗಾನ ಗ್ರಾಮದ ತೌಡುಗೋಳಿ ಎಂಬಲ್ಲಿ ಬರುತ್ತಿದ್ದಾಗ ಮಹಿಳೆಯೊಬ್ಬರು ಬಸ್ಸನ್ನು ಗಮನಿಸದೆ ರಸ್ತೆ ದಾಟಿದ್ದು, ಈ ಸಂದರ್ಭದಲ್ಲಿ ಚಾಲಕ ತ್ಯಾಗರಾಜ್‌ ಕೈರಂಗಳ ಸಮಯ ಪ್ರಜ್ಞೆಯಿಂದ ಮಹಿಳೆ ಕೂದಳೆಲೆಯ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾರೆ.

ಮಹಿಳೆಯನ್ನ ಅಪಘಾತದಿಂದ ಪಾರು ಮಾಡಿದ ಚಾಲಕನನ್ನು ಸ್ಥಳೀಯರು ಶ್ಲಾಘಿಸಿದ್ದು ಘಟನೆಯ ಸಿಸಿಟಿವಿ ದೃಶ್ಯ ಜಾಲ ತಾಣಗಳಲ್ಲಿ ವೈರಲ್‌ ಆಗಿ ಎಲ್ಲ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಸುದ್ದಿವಾಹಿನಿಗಳಲ್ಲಿ ಹೀರೋ ಆಗಿದ್ದ ಬಸ್ಸು ಚಾಲಕನ ವಿರುದ್ಧ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಕರ್ಕಷ ಹಾರ್ನ್,ಅಜಾಗರೂಕತೆ ಚಾಲನೆಯ ಕೇಸ್‌ ಜಡಿದದ್ದಲ್ಲದೆ , ಬಸ್ಸನ್ನು ವಶಕ್ಕೆ ಪಡೆದು ಕರ್ಕಷ ಹಾರ್ನನ್ನು ಕಿತ್ತೆಸೆದು ಬಳಿಕ ಬಸ್ಸನ್ನು ಬಿಟ್ಟು ಕಳಿಸಿದ್ದಾರೆ.