5 ವರ್ಷದ ಹಿಂದೆ ಬಿಹಾರದಿಂದ ಬಂದು ಗಾಂಜಾ ಮಾರಿ 3 ಕೋಟಿ, ಫ್ಲಾಟ್ ಮಾಡಿದ್ದವನ ಆಸ್ತಿ ಜಪ್ತಿ!
* ಉತ್ತರ ಭಾರತದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಅಂಜಯ್
* ಡ್ರಗ್ಸ್ ದಂಧೆ: 2009ರಲ್ಲಿ ಬಿಹಾರದಲ್ಲಿ 4 ವರ್ಷ ಜೈಲು
* ಜೈಲಿಂದ ಬಿಡುಗಡೆ ಬಳಿಕ ಕುಟುಂಬ ಸಮೇತ ಬೆಂಗಳೂರಿಗೆ
* ಇಲ್ಲೂ ಗಾಂಜಾ ವ್ಯಾಪಾರ ಮುಂದುವರಿಸಿದ್ದ ದಂಧೆಕೋರ
ಬೆಂಗಳೂರು(ಸೆ. 05) ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಮಾದಕ ವಸ್ತು ಜಾಲದ ವಿರುದ್ಧ ದಾಳಿ ತೀವ್ರಗೊಳಿಸಿರುವ ಪೊಲೀಸರು, ಡ್ರಗ್ಸ್ ದಂಧೆಯಿಂದಲೇ ಪೆಡ್ಲರ್‌ವೊಬ್ಬ ಕೆಲವೇ ವರ್ಷಗಳ ಅಂತರದಲ್ಲಿ ಸಂಪಾದಿಸಿದ್ದ ಕೋಟಿಗಟ್ಟಲೆ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಸಾಗಣೆದಾರನಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ರಾಜ್ಯದ ಮೊದಲ ಪ್ರಕರಣ ಇದಾಗಿದೆ.
ಆನೇಕಲ್ ತಾಲೂಕಿನ ಬ್ಯಾಗಡದೇವನಹಳ್ಳಿ ನಿವಾಸಿ, ಬಿಹಾರ ಮೂಲದ ಅಂಜಯ್ ಕುಮಾರ್ ಸಿಂಗ್ (54) ಎಂಬಾತನಿಗೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾಗಿರುವ ಆಸ್ತಿಯ ಸರ್ಕಾರಿ ಮಾರ್ಗಸೂಚಿ ದರ 1.68 ಕೋಟಿ ರು. ಇದೆ. ಇದರ ಮಾರುಕಟ್ಟೆಮೌಲ್ಯ 3 ಕೋಟಿ ರು.ಗಿಂತ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ 3 ನಿವೇಶನ ಹಾಗೂ 1 ಫ್ಲ್ಯಾಟ್ ಅನ್ನು ಈತ ಖರೀದಿ ಮಾಡಿದ್ದ. ಆದರೆ ಎಲ್ಲವನ್ನೂ ಪತ್ನಿ ಶೀಲಾದೇವಿ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂರ್ಯ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಈತನಿಂದ ಸ್ಕಾರ್ಪಿಯೋ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಹೆಸರಿಗೆ ಮಾತ್ರ ಮಾಹಿತಿ ದಾರ.. ಮಾಡುತ್ತಿದ್ದುದ್ದೆಲ್ಲ ಬೇರೆ ಕೆಲಸ
ಆರೋಪಿ ಸಂಪೂರ್ಣವಾಗಿ ಡ್ರಗ್ಸ್ ದಂಧೆಯಿಂದಲೇ ಅಕ್ರಮವಾಗಿ ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆರ್ಥಿಕ ವಂಚನೆ ತನಿಖಾ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
5 ವರ್ಷದ ಹಿಂದೆ ಕರ್ನಾಟಕಕ್ಕೆ: ಬಿಹಾರದ ಅಂಜಯ್ ಕುಮಾರ್ ಈ ಹಿಂದೆ ಬಿಹಾರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ನಿರತನಾಗಿದ್ದ. 2009ರಲ್ಲಿ ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ಬಿಹಾರದಲ್ಲಿ 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಜೈಲಿನಿಂದ ಹೊರಬಂದ ಬಳಿಕ ಕರ್ನಾಟಕಕ್ಕೆ ಕುಟುಂಬ ಸಮೇತ ಸ್ಥಳಾಂತರಗೊಂಡು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನೆಲೆಸಿದ್ದ. ಒರಿಸ್ಸಾ ಹಾಗೂ ವಿಶಾಖಪಟ್ಟಣದಿಂದ ಗಾಂಜಾ ತರಿಸಿಕೊಂಡು ನಗರದಲ್ಲಿ ಪೂರೈಕೆಗೆ ಜಾಲ ಸೃಷ್ಟಿಸಿಕೊಂಡಿದ್ದ. ಕಳೆದ ಐದು ವರ್ಷಗಳಿಂದ ಈ ಕೃತ್ಯದಲ್ಲಿ ಈತ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.