Vijayapura Crime: ಬೇಸಿಗೆ ಬಂದ್ರೆ ವಿಜಯಪುರದಲ್ಲಿ ಕಳ್ಳರಿಗೆ ಹಬ್ಬವೋ ಹಬ್ಬ: ಪೊಲೀಸರಿಗೂ ಪೀಕಲಾಟ..!

*  ಬೇಸಿಗೆ ಝಳ ಅಂತಾ ಮಾಳಿಗೆ ಮೇಲೆ ಮಲಗೋಕು ಮುನ್ನ ಎಚ್ಚರ.. ಎಚ್ಚರ
⦁  ಬೆಳಗಾಗೋದ್ರಲ್ಲಿ ನಿಮ್ಮ ಮನೆಯನ್ನೇ ಗುಡುಸಿ ಗುಂಡಾಂತರ ಮಾಡ್ತಾರೆ ಹುಷಾರ್
⦁  ಬೇಸಿಗೆ ಕಳ್ಳರಿಂದ ಹೈರಾಣಾದ ವಿಜಯಪುರ ಜನ 
 

Share this Video
  • FB
  • Linkdin
  • Whatsapp

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ(ಏ.11): ಗುಮ್ಮಟನಗರಿ ವಿಜಯಪುರದಲ್ಲಿ ಬೇಸಿಗೆ ಬಂದ್ರೆ ಸಾಕು ಜನ ಬೆಚ್ಚಿ ಬೀಳ್ತಿದ್ದಾರೆ. ಯಾವಾಗ ಏನಾಗುತ್ತೋ ಅನ್ನೋ ಆತಂಕದಲ್ಲಿರ್ತಾರೆ. ಇತ್ತ ಬೇಸಿಗೆ ಝಳ ಪೊಲೀಸರಿಗು ತಲೆನೋವು ತಂದಿದೆ. ಇಷ್ಟಕ್ಕೆಲ್ಲ ಕಾರಣ ಬೇಸಿಗೆ ಕಳ್ಳರು. ಬೇಸಿಗೆ ಝಳ ಅಂತಾ ಜನರು ರಾತ್ರಿ ಮಾಳಿಗೆ ಸೇರಿದ್ರೆ ಇವ್ರು ಮನೆ ಹೊಕ್ಕು ಗುಡಿಸಿ ಗುಂಡಾಂತರ ಮಾಡ್ತಿದ್ದಾರೆ..

ಬೇಸಿಗೆ ಕಳ್ಳರ ಕಾಟಕ್ಕೆ ಜನರು ಹೈರಾಣು: 

ವಿಜಯಪುರ ಜಿಲ್ಲೆಯಲ್ಲಿ ಬೇಸಿಗೆ ನೆತ್ತಿಯನ್ನ ಸುಡ್ತಿದೆ. ಬೇಸಿಗೆ ಝಳದಿಂದ ಜನ ಹೈರಾಣಾಗಿದ್ದಾರೆ. ಬೇಸಿಗೆ ಝಳದ ಜೊತೆಗೆ ಈಗ ಕಳ್ಳರ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ರಾತ್ರಿ ಝಳದಿಂದ ಜನರು ಮನೆ ಮಾಳಿಗೆ ಮೇಲೆ ಮಲಗಿಕೊಂಡರೆ ಕಳ್ಳರು ಮನೆಯೊಳಗೆ ಹೊಕ್ಕು ದೋಚುತ್ತಿದ್ದಾರೆ. ಬೇಸಿಗೆ ಝಳದಿಂದ ಹೈರಾಣಾದ ಜನ ಮಾಳಿಗೆ ಮೇಲೆ ಮಲಗಿ ಗಾಢನಿದ್ರೆಗೆ ಜಾರಿದ ಮೇಲೆ ಖದೀಮರು ಕಳ್ಳತನ ಮಾಡಿ ಪರಾರಿಯಾಗ್ತಿದ್ದಾರೆ.

ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ

ಇಲ್ಲಿ ಕಳ್ಳರಿಗೆ ಬೇಸಿಗೆ ಬಂದ್ರೆ ಹಬ್ಬವೋ ಹಬ್ಬ: 

ವಿಜಯಪುರದಂತ ಜಿಲ್ಲೆಯಲ್ಲಿ ಬೇಸಿಗೆ ಬಂದ್ರೆ ಗ್ರಾಮೀಣ ಪ್ರದೇಶಗಳಲ್ಲಿ ಕರೆಂಟ್‌ ಸಮಸ್ಯೆ ಶುರುವಾಗಿ ಬಿಡುತ್ತೆ. ರಾತ್ರಿ ಕರೆಂಟ್‌ ಹೋದ್ರೆ ಬೇಸಿಗೆ ಝಳಕ್ಕೆ ಮನೆಯ ಒಳಗೆ ಮನಗೋಕೆ ಜನ ಹಿಂಸೆ ಪಡೆಬೇಕಾಗುತ್ತೆ. ನಗರ ಪ್ರದೇಶಗಳು ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಮನೆ ಹೊರಗೆ, ಮಾಳಿಗೆಗಳ ಮೇಲೆ ಮಲಗೋದು ಈ ಭಾಗದ ಜನರಿಗೆ ರೂಢಿ. ಇದರ ದುರುಪಯೋಗ ತೆಗೆದುಕೊಳ್ತಿರೋ ಕಳ್ಳರು ರಾತ್ರಿ ಮನೆಗಳ ಕೀಲಿ ಮುರಿದು ಸೈಲೆಂಟ್ ಆಗಿಯೇ ಮನೆಗಳನ್ನ ಗುಡಿಸಿಗುಂಡಾಂತರ ಮಾಡ್ತಿದ್ದಾರೆ. ಮನೆಯಲ್ಲಿ ಚಿನ್ನಾಭರಣ ದೋಚುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಬಹುತೇಕ ಜನರು ಮಾಳಿಗೆ ಮೇಲೆಯೇ ಮಲಗೊದ್ರಿಂದ ಕಳ್ಳರಿಗೆ ಇದು ಹಬ್ಬವಾದಂತಾಗಿದೆ..

ಪೊಲೀಸರಿಗೂ ತಲೆನೋವಾದ ಬೇಸಿಗೆ ಕಳ್ಳರು: 

ಜನರಲ್ಲಿ ಆತಂಕ ಹುಟ್ಟಿಸಿರುವ ಬೇಸಿಗೆ ಕಳ್ಳರು, ಇತ್ತ ಪೊಲೀಸರಗು ತಲೆನೋವು ಆಗಿದ್ದಾರೆ. ಗ್ರಾಮೀಣ ಪ್ರದೇಶ, ನಗರಗಳಲ್ಲಿ ತಡರಾತ್ರಿ ಸೈಲೆಂಟ್‌ ಆಗಿಯೇ ಕಳ್ಳರು ಮನೆಗಳಿಗೆ ಕನ್ನಾಹಾಕ್ತಿರೋದು ಪೊಲೀಸರಿಗು ತಲೆನೋವು ತಂದಿದೆ. ಪೊಲೀಸರ ಪೆಟ್ರೊಲಿಂಗ್‌ ವೇಳೆ ಅಡಗಿ ಕುಳಿತುಕೊಳ್ಳುವ ಕಳ್ಳರು ಪೊಲೀಸರು ಕಣ್ಮರೆಯಾದ ಬಳಿಕ ಮನೆ ಬೀಗಗಳನ್ನ ಒಡೆದು ಕಳ್ತನ ಮಾಡ್ತಿದ್ದಾರೆ. ಇನ್ನು ಮನೆ ಮಾಲಿಕರು ಬೆಳಿಗ್ಗೆ ಎದ್ದು ಮಾಳಿಗೆಯಿಂದ ಕೆಳಗಿಳಿದಾಗಲೇ ಕೃತ್ಯಗಳು ಬಯಲಾಗ್ತೀವೆ..

ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ದರ ಇಳಿಸ್ತಾರಾ ಬೊಮ್ಮಾಯಿ?

ಮುದ್ದೇಬಿಹಾಳದಲ್ಲಿ ಸರಣಿ ಕಳ್ಳತನ: 

ಮುದ್ದೇಬಿಹಾಳ ಪಟ್ಟಣದ ವಿದ್ಯಾನಗರ ನಿವಾಸಿ ಸರ್ಕಾರಿ ಶಾಲಾ ಶಿಕ್ಷಕ ಗಂಗಣ್ಣ ಮೇಟಿ ಎಂಬುವರ ಮನೆಯನ್ನು ಬೇಸಿಗೆ ಕಳ್ಳರು ದೋಚಿದ್ದಾರೆ. ರಾತ್ರಿ ಮನೆ ಮಾಳಿಗೆ ಮೇಲೆ ಕುಟುಂಬಸ್ಥರು ಮಲಗಿದ್ದಾಗ ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. 25 ಸಾವಿರ ನಗದು, 4 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ತಾಳಿ ಚೈನು, ಉಂಗುರ, ಬೆಂಡೋಲೆ ಸೇರಿದಂತೆ ಚಿನ್ನಾಭರಣಗಳನ್ನ ದೋಚಿದ್ದಾರೆ. ಬೆಳಿಗ್ಗೆ ಮಾಳಿಗೆ ಇಳಿದು ಬಂದು ನೋಡಿದಾಗಲೇ ಕೃತ್ಯ ಬಯಲಾಗಿದೆ. ಅಷ್ಟೇ ಅಲ್ಲದೆ ಇದೆ ಪಟ್ಟಣದಲ್ಲಿ ಮತ್ತೆ ಮೂರು ಮನೆಗಳ ಸರಣಿ ಕಳ್ಳತನವು ರಾತ್ರಿ ನಡೆದಿದೆ.. ಇದಕ್ಕೆಲ್ಲ ಮುದ್ದೇಬಿಹಾಳ ಪಟ್ಟಣದಲ್ಲಿ ಪೊಲೀಸರು ಪೆಟ್ರೋಲಿಂಗ್ ಸರಿಯಾಗಿ ಮಾಡದೆ ಇರೋದೆ ಇಷ್ಟೆಲ್ಲ ಕೃತ್ಯಗಳಿಗೆ ಕಾರಣ ಎಂದಿದ್ದಾರೆ..

ವಿಜಯಪುರ ಎಸ್ಪಿ ಆನಂದಕುಮಾರ್‌ ಎಚ್ಚರಿಕೆ: 

ಬೇಸಿಗೆ ಕಳ್ಳರ ಬಗ್ಗೆ ವಿಜಯಪುರ ಎಸ್ಪಿ ಆನಂದಕುಮಾರ್‌ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿದ ಅವರು ಪೊಲೀಸ್‌ ಸಿಬ್ಬಂದಿಗಳ ನೈಟ್‌ ರೌಂಡ್‌ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾರ್ವಜನಿಕರು ಸಹ ರಾತ್ರಿ ಮಾಳಿಗೆ ಅಥವಾ ಮನೆಯಿಂದ ಹೊರಗೆ ಮಲಗುವಾಗ ಎಚ್ಚರಿಕೆ ವಹಿಸಬೇಕು. ಬೀಗಗಳನ್ನ ಹಾಕಿಕೊಂಡು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕು ಎಂದಿದ್ದಾರೆ. ರಾತ್ರಿ ಅನುಮಾನಾಸ್ಪದ ವ್ಯಕ್ತಿಗಳು ಕಂಡಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಕರೆಮಾಡಿ ಎಂದಿದ್ದಾರೆ. 

Related Video