Hubballi: ಮದುವೆ ನಿರಾಕರಿಸಿದ ಯುವತಿ ಮನೆಗೆ ನುಗ್ಗಿ ತಾಯಿಗೆ ಚಾಕು ಇರಿದ ಪಾಗಲ್ ಪ್ರೇಮಿ

ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. 

First Published Sep 26, 2024, 4:52 PM IST | Last Updated Sep 26, 2024, 4:52 PM IST

ಹುಬ್ಬಳ್ಳಿ (ಸೆ.26): ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಳೆದ ಎರಡ್ಮೂರು ತಿಂಗಳಲ್ಲಿ 4ನೇ ಬಾರಿಗೆ ಪೊಲೀಸರ ಬಂದೂಕು ಸದ್ದು ಮಾಡಿದಂತಾಗಿದೆ.

ಆಗಿದ್ದೇನು?: ಹಿಯಾನಗರದಲ್ಲಿ ತಾಯಿ, ಮೂವರು ಮಕ್ಕಳು, ಅಜ್ಜಿ ಇರುವ ಕುಟುಂಬವದು. ಆ ಮನೆಯ ಯಜಮಾನ 2013ರಲ್ಲಿ ತೀರಿಕೊಂಡಿದ್ದ. ಈ ಮನೆಯ ಯುವತಿಯೊಬ್ಬಳು ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಕಳೆದ ಐದು ವರ್ಷದಿಂದ ಮಹೇಶ ಮೇಟಿ (24) ಎಂಬಾತ ತನ್ನನ್ನು ಪ್ರೀತಿಸು ಎಂದು ಬಲವಂತ ಮಾಡುತ್ತಿದ್ದ. ಆದರೆ, ಕಳೆದ ಕೆಲ ದಿನಗಳಿಂದ ಆತ ಸುಮ್ಮನಾಗಿದ್ದ. ಇವತ್ತು ಮಧ್ಯಾಹ್ನ ಏಕಾಏಕಿಯಾಗಿ ಅವರ ಮನೆಗೆ ನುಗ್ಗಿ ತನ್ನನ್ನು ಮದುವೆಯಾಗು ಇಲ್ಲದಿದ್ದಲ್ಲಿ ನಿಮ್ಮ ಮನೆಯಲ್ಲಿದ್ದವರನ್ನು ಚಾಕುವಿನಿಂದ ಇರಿದುಕೊಲ್ಲುತ್ತೇನೆ ಎಂದು ಹೆದರಿಸಿದ್ದಾನೆ. ಅಲ್ಲದೇ, ಯರ್ರಾಬಿರ್ರಿ ಚಾಕು ಬೀಸಲು ಶುರು ಮಾಡಿದ್ದಾನೆ.

ಆಗ ಯುವತಿಯ ತಾಯಿ ನೀಲಾ ಹಂಪಣ್ಣವರ ಆತನಿಗೆ ಬುದ್ಧಿ ಹೇಳಲು ಮುಂದಾಗಿದ್ದಾಳೆ. ಆದರೆ ಕೇಳುವ ಸ್ಥಿತಿಯಲ್ಲಿದ್ದ ಆತ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಕೂಡಲೇ ಮನೆಯಲ್ಲಿದ್ದ ಉಳಿದ ಹೆಣ್ಮಕ್ಕಳು ಆತನನ್ನು ಬಾಗಿಲಿನಿಂದ ಹೊರಗೆ ತಳ್ಳಿದ್ದಾರೆ. ಅಷ್ಟರಲ್ಲೇ ಸುತ್ತಮುತ್ತಲಿನವರು ಸೇರಿದ್ದಾರೆ. ಆತ ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಸ್ಥಳೀಯರು ಸೇರಿಕೊಂಡು ಚಾಕುವಿನ ಇರಿತಕ್ಕೊಳಗಾದ ನೀಲಾ ಹಂಪಣ್ಣವರ ಅವರನ್ನು ಕೆಎಂಸಿಆರ್‌ಐಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನೀಲಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.