
ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
ಬೆಂಗಳೂರಿನಲ್ಲಿ ನಡೆದ ಎರಡು ಪ್ರತ್ಯೇಕ ದುರಂತ ಘಟನೆಗಳಲ್ಲಿ ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ. ತಾಯಿಯ ಮೇಲಿನ ದ್ವೇಷಕ್ಕೆ ಆರು ವರ್ಷದ ಬಾಲಕಿಯನ್ನು ಕೊಲೆ ಮಾಡಲಾಗಿದ್ದರೆ, ಪ್ರೇಮಿಯೊಬ್ಬನ ಕಿರುಕುಳ ತಾಳಲಾರದೆ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮುಗ್ಧ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಪಕ್ಕದ ಮನೆಯವನ ಕ್ರೌರ್ಯಕ್ಕೆ ಆರು ವರ್ಷದ ಬಾಲಕಿ ಪ್ರಾಣ ಕಳೆದುಕೊಂಡರೆ, ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಪಾಗಲ್ ಪ್ರೇಮಿಯ ಕಾಟಕ್ಕೆ 17 ವರ್ಷದ ವಿದ್ಯಾರ್ಥಿನಿ ಆತ್ಮ*ಹತ್ಯೆಗೆ ಶರಣಾಗಿದ್ದಾಳೆ.
ಪ್ರಕರಣ 1:
ತಾಯಿ ಮೇಲಿನ ಸೇಡಿಗೆ ಬಲಿಯಾದ ಮಗು ನಗರದ ಹೊರವಲಯದಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದ ದಂಪತಿಯ 6 ವರ್ಷದ ಪುತ್ರಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. ಪೊಲೀಸರು ತನಿಖೆ ನಡೆಸಿದಾಗ, ಅದೇ ಏರಿಯಾದ ಮೋರಿಯೊಂದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ತನಿಖೆಯ ವೇಳೆ ಪಕ್ಕದ ಮನೆಯ ಯೂಸಫ್ ಎಂಬಾತನೇ ಹಂತಕ ಎಂಬುದು ಬಯಲಾಗಿದೆ. ಈತ ಬಾಲಕಿಯ ತಾಯಿ ಮೇಲಿನ ದ್ವೇಷಕ್ಕೆ ಆಕೆಯನ್ನು ಕೊಂದು ಮೋರಿಯಲ್ಲಿ ಎಸೆದಿದ್ದ ಎನ್ನಲಾಗಿದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಪ್ರಕರಣ 2:
ಪಾಗಲ್ ಪ್ರೇಮಿಯ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮ*ಹತ್ಯೆ ಇನ್ನೊಂದು ಘಟನೆಯಲ್ಲಿ, 17 ವರ್ಷದ ಕಾಲೇಜು ವಿದ್ಯಾರ್ಥಿನಿ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಕೂಲಿ ಕೆಲಸ ಮಾಡುವ ಪೋಷಕರು ಮನೆಗೆ ಬಂದಾಗ ಮಗಳ ಸಾವಿನ ಸುದ್ದಿ ತಿಳಿದು ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ 'ಪಾಗಲ್ ಪ್ರೇಮಿ'ಯೊಬ್ಬನ ಕಿರುಕುಳದ ಬಗ್ಗೆ ಉಲ್ಲೇಖಿಸಲಾಗಿದೆ. ‘ಪ್ರೀತ್ಸೆ ಪ್ರೀತ್ಸೆ’ ಎಂದು ಬೆನ್ನತ್ತಿದ್ದ ಯುವಕನ ಕಾಟ ತಾಳಲಾರದೆ, ಕಲಿಯುವ ವಯಸ್ಸಿನಲ್ಲೇ ಆಕೆ ಮಸಣ ಸೇರಿದ್ದಾಳೆ. ಪ್ರೀತಿಯನ್ನು ನಿರಾಕರಿಸಿದ್ದೇ ಆಕೆಗೆ ಸಾವಿನ ಶಿಕ್ಷೆಯಾಗಿ ಪರಿಣಮಿಸಿದೆ.
ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ಕಿರುಕುಳ ಮತ್ತು ಸಣ್ಣ ಪುಟ್ಟ ದ್ವೇಷಕ್ಕೆ ಮಕ್ಕಳನ್ನು ಬಲಿಪಡೆಯುತ್ತಿರುವ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ಎರಡೂ ಪ್ರಕರಣಗಳ ಕುರಿತು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.