ಮ್ಯಾಕ್ಸ್ ಬ್ಯೂಟಿಗೆ ಕಿರುಕುಳ.. ವರಲಕ್ಷ್ಮೀ ಲೈಫ್ನ ಕರಾಳ ಅಧ್ಯಾಯ
ಬಹುಭಾಷಾ ನಟಿ ವರಲಕ್ಷ್ಮೀ ಶರತ್ಕುಮಾರ್ ಬಾಲ್ಯದಲ್ಲಿ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಟೆಲಿವಿಷನ್ ಶೋವೊಂದರಲ್ಲಿ ಈ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಹುಭಾಷಾ ನಟಿ, ಮಾಣಿಕ್ಯ ಬ್ಯೂಟಿ ವರಲಕ್ಷ್ಮೀ ಶರತ್ಕುಮಾರ್ ತಮ್ಮ ಬದುಕಿನಲ್ಲಿ ನಡೆದ ಕರಾಳ ಅಧ್ಯಾಯವೊಂದನ್ನ ತೆರೆದಿಟ್ಟಿದ್ದಾರೆ. ಇತ್ತೀಚಿಗೆ ಟೆಲಿವಿಷನ್ ಶೋವೊಂದರ ವೇದಿಕೆ ಮೇಲೆ ಬಾಲ್ಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಅನ್ನೋ ಶಾಕಿಂಗ್ ಸಂಗತಿಯನ್ನ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ತಾರಾಪುತ್ರಿ ವರಲಕ್ಷ್ಮೀ ಲೈಫ್ನಲ್ಲಿ ನಡೆದಿದ್ದೇನು..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಯೆಸ್ ವರಲಕ್ಷ್ಮೀ ಶರತ್ಕುಮಾರ್ ತಮ್ಮ ಬದುಕಿನ ಒಂದು ಕೆಟ್ಟ ಘಟನೆಯನ್ನ ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ವರಲಕ್ಷ್ಮೀ ಖ್ಯಾತ ನಟ ಶರತ್ಕುಮಾರ್ ಅವರ ಪುತ್ರಿ. ತಂದೆಯಂತೆಯೇ ವರಲಕ್ಷ್ಮೀ ಕೂಡ ಪ್ರತಿಭಾನ್ವಿತೆ. ಚತುರ್ಭಾಷೆಗಳಲ್ಲಿ ಮಿಂಚಿರೋ ಸ್ಟಾರ್ ನಟಿ. ಶರತ್ಕುಮಾರ್ ಕನ್ನಡದವರೇ ಆದ್ರೆ ನೆಲೆಕಂಡುಕೊಂಡಿದ್ದು ತಮಿಳಿನಲ್ಲಿ. ಇಂಥಾ ಶರತ್ಕುಮಾರ್ ಪುತ್ರಿಯನ್ನ ಕನ್ನಡ ಸಿನಿಪ್ರಿಯರಿಗೆ ಪರಿಚಯ ಮಾಡಿಸಿದ್ದು ಕಿಚ್ಚ ಸುದೀಪ್. 2014ರಲ್ಲಿ ಬಂದ ಮಾಣಿಕ್ಯ ಸಿನಿಮಾ ಮೂಲಕ ವರಲಕ್ಷ್ಮೀ ಕನ್ನಡದವರಿಗೆ ಪರಿಚಿತರಾದ್ರು.
ತಮಿಳು, ತೆಲುಗು, ಮಲಯಾಳಂನಲ್ಲೂ ಹಲವು ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ ವರಲಕ್ಷ್ಮೀ. ತನ್ನ ನಟನೆಯಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಇತ್ತೀಚಿಗೆ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸೋ ಮೂಲಕ ಮತ್ತೊಮ್ಮೆ ಕನ್ನಡ ಸಿನಿರಸಿಕರ ಎದುರು ಬಂದಿದ್ರು. ಇಂಥಾ ಸ್ಟಾರ್ ನಟಿ ಈಗ ತನ್ನ ಬದುಕಿನಲ್ಲಿ ನಡೆದ ಕರಾಳ ಅಧ್ಯಾಯ ತೆರೆದಿಟ್ಟಿದ್ದಾರೆ. ಇತ್ತೀಚಿಗೆ ಟೆಲಿವಿಷನ್ ಶೋವೊಂದರಲ್ಲಿ ಭಾಗಿಯಾಗಿದ್ದ ವರಲಕ್ಷ್ಮೀ ಅಲ್ಲಿನ ಸ್ಪರ್ಧಿಯೊಬ್ಬರ ಕಥೆ ಕೇಳಿ ಕಣ್ಣೀರು ಹಾಕಿದ್ರು. ಆಕೆ ಮೇಲೆ ದೌರ್ಜನ್ಯ ನಡೆದ ವಿಷ್ಯ ಕೇಳಿ ತಾನು ಲೈಂಗಿಕ ದೌರ್ಜನ್ಯದ ಬಲಿಪಶು ಅಂತ ಹೇಳಿದ್ರು.
ನನ್ನ ಕಥೆಯೂ ನಿನ್ನ ಕಥೆಯೂ ಒಂದೇ, ಅಪ್ಪ-ಅಮ್ಮ ಇಬ್ಬರು ಅವರ ಕೆಲಸದಲ್ಲಿ ನಿರತರಾಗಿದ್ದರು. ಹಾಗಾಗಿ ನಾನು ಚಿಕ್ಕವಳಿದ್ದಾಗ ನನ್ನನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಒಮ್ಮೆ 5 ರಿಂದ 6 ಜನ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಿನ್ನ ಸ್ಟೋರಿ ನನ್ನ ಸ್ಟೋರಿ ಎರಡು ಒಂದೆ. ನನಗೆ ಮಕ್ಕಳಿಲ್ಲ ಆದರೆ ನಾನು ಪೋಷಕರಿಗೆ ಹೇಳುವುದಿಷ್ಟೇ, ನಿಮ್ಮ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಿ.
ಬಾಲ್ಯದಲ್ಲಿ ತನ್ನ ತಂದೆ ತಾಯಿ ಇಬ್ಬರೂ ಬ್ಯುಸಿಯಾಗಿ ಇರ್ತಾ ಇದ್ರು. ಆಗ ಸಂಬಂಧಿಕರ ಮನೆಯಲ್ಲಿ ತನ್ನನ್ನ ಬಿಡ್ತಾ ಇದ್ರು. ಆಗ ನನ್ನ ಮೇಲೆ 5-6 ಜನರು ಲೈಂಗಿಕ ದೌರ್ಜನ್ಯ ಎಸಗಿದ್ರು ಅನ್ನೋ ನೋವಿನ ಕಥೆ ಹೇಳಿ ಕಣ್ಣೀರಾಗಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಕಿಡ್ಗಳ ಲೈಫ್ ಕಲರ್ಫುಲ್ ಆಗಿರುತ್ತೆ ಅಂತ ಎಲ್ಲರೂ ಅಂದುಕೊಳ್ತಾರೆ. ಆದ್ರೆ ವರಲಕ್ಷ್ಮೀ ಶರತ್ಕುಮಾರ್ ಕಥೆ ಕೇಳಿದವರು ನಿಜಕ್ಕೂ ಅಚ್ಚರಿ ಪಡ್ತಾ ಇದ್ರು. ವರಲಕ್ಷ್ಮೀ ಕಣ್ಣೀರ ಕಥೆ ಕೇಳಿದ ಫ್ಯಾನ್ಸ್ ತಾವೂ ಕಣ್ಣೀರು ಸುರಿಸ್ತಾ ಇದ್ದಾರೆ.