ಸ್ತ್ರೀಶಕ್ತಿಗೆ ಬಲ ತುಂಬಿದ ಗಾರ್ಮೆಂಟ್ಸ್ ಉದ್ಯಮ: ಮಗಳ ಕನಸಿಗೆ ನೀರೆರೆದು ಪೋಷಿಸಿದ ಕುಟುಂಬ!
ಆಕೆ ದೊಡ್ಡ ಉದ್ಯಮಿಯಾಗುವ ಕನಸು ಕಂಡಿದ್ದಳು. ಅದರಂತೆ ತಾಯಿಯ ಉತ್ಸಾಹಕ್ಕೆ ರೆಕ್ಕೆ ಕಟ್ಟಿದ್ದ ಆಕೆಯನ್ನ ಕೊರೊನಾ ಎಂಬ ಮಹಾಮಾರಿ ಬಲಿ ತೆಗೆದುಕೊಂಡಿತು. ಮಗಳ ಸಾವಿನ ಶೋಕ ಸಾಗರದಲ್ಲಿ ಮುಳುಗಿದ್ದ ಕುಟುಂಬ ಈಗ ನೋವನ್ನು ಮೀರಿ ನಿಂತಿದೆ. ಮಗಳ ಕನಸಿಗೆ ನೀರೆರಿದು ಪೋಷಿಸಿದೆ. ಮಗಳು ಆರಂಭಿಸಿದ ಕನಸಿನ ಉದ್ಯಮಕ್ಕೆ ಮರು ಜೀವ ತುಂಬಿ ಹೆಮ್ಮರವಾಗಿಸಿದ್ದಾರೆ. ಹತ್ತಾರು ಬಡ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಂಡ್ಯ: ಹತ್ತಾರು ಮಷಿನ್‌ಗಳ ಚಟಪಟ ಸದ್ದು, ಬಟ್ಟೆಗಳಿಗೆ ಹೊಲಿಗೆ ಹಾಕುವುದರಲ್ಲಿ ನಿರತರಾಗಿರೋ ಮಹಿಳೆಯರು. ಅವರಿಗೆ ಮಾರ್ಗದರ್ಶನ ನೀಡ್ತಿರೋ ದಂಪತಿಗಳು. ಈ ದಂಪತಿಗಳ ಮುಖದಲ್ಲಿ ಕಾಣ್ತಿರುವ ಸಾರ್ಥಕ ಭಾವದ ಹಿಂದೆ ನೋವಿನ ಕಥೆಯಿದೆ, ಸ್ಪೂರ್ತಿಯ ಸೆಲೆಯಿದೆ. ಹೌದು, ಈ ದಂಪತಿಗಳ ಹೆಸರು ಲತಾ ಹಾಗೂ ಮಹದೇವಯ್ಯ. ವೃತ್ತಿಯಲ್ಲಿ ಮಹದೇವಯ್ಯ ಉಪನ್ಯಾಸಕರು, ಲತಾ ಅವರು ಹೌಸ್ ವೈಫ್. ಮಂಡ್ಯದ ಕೆಹೆಚ್‌ಬಿ ಕಾಲೋನಿಯಲ್ಲಿ ನೆಲೆಸಿರುವ ಇವರಿಗೆ ಇಬ್ಬರು ಮಕ್ಕಳು. ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ಪುತ್ರಿ ಸಿಂಧು, ಟೇಲರಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ತಾಯಿಯ ಉತ್ಸಾಹ ಕಂಡು ಉದ್ಯಮ ಸ್ಥಾಪಿಸಿದ್ದರು. ಉದ್ಯಮದ(business) ಜೊತೆಗೆ ಐಎಎಸ್ ತಯಾರಿ ನಡೆಸುತ್ತಿದ್ದ ಸಿಂಧು ದುರಾದೃಷ್ಟವಶಾತ್ ಕೋವಿಡ್ ಮಹಾಮಾರಿಗೆ ಪ್ರಾಣಬಿಟ್ಟರು.
ಸಿಂಧು ಕಳೆದುಕೊಂಡು ಇಡೀ ಕುಟುಂಬ ಕಗ್ಗತ್ತಲೆಗೆ ಜಾರಿತ್ತು. ಆದರೆ ನೋವಿನಿಂದ ಹೊರಬಂದು ಉದ್ಯಮದಲ್ಲೇ ಮಗಳನ್ನು ಕಾಣುವ ಕನಸು ಕಂಡ ಪೋಷಕರು ಮಗಳ ಕನಸಿಗೆ ನೀರೆರದು ದೊಡ್ಡ ಹೆಮ್ಮರವಾಗಿಸಿದ್ದಾರೆ. ತಮ್ಮ ನಿವಾಸದಲ್ಲೇ 3-4 ವರ್ಷಗಳ ಹಿಂದೆ ಶುರುವಾದ ಲುಂಬಿನಿ ಗಾರ್ಮೆಂಟ್ಸ್(Lumbini Garments) ಈಗ ಬೃಹದಾಕಾರವಾಗಿ ಬೆಳೆದಿದೆ. ಆರಂಭದಲ್ಲಿ ಹತ್ತಿಪ್ಪತ್ತು ಮಂದಿ ಕೆಲಸ ಮಾಡ್ತಿದ್ದ ಕಾರ್ಖಾನೆಯಲ್ಲಿ ಈಗ 60ಕ್ಕೂ ಹೆಚ್ಚು ಜನರಿಗೆ ಉದ್ಯೋಗ(Job) ನೀಡಲಾಗಿದೆ. ಶೇ 99 ರಷ್ಟು ಮಹಿಳೆಯರಿಗೆ(women) ಉದ್ಯೋಗ ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕಿಗೆ ಲತಾ ಅವರು ಬೆಳಕಾಗಿದ್ದಾರೆ.
ಆರಂಭದಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಅಡಿ ಬ್ಯಾಂಕ್ ಆಫ್ ಬರೋಡದಿಂದ 25 ಲಕ್ಷ ಸಾಲ ಪಡೆದು ಸಮರ್ಪಕವಾಗಿ ಹಿಂದಿರುಗಿಸಿದ್ದ ದಂಪತಿಗಳು. ಮಗಳ ಸಾವಿನ ನೋವಿಂದ ಹೊರಬಂದು ಮತ್ತೆ 1 ಕೋಟಿ ಸಾಲ ಪಡೆದು ಉದ್ದಿಮೆ ಹೊಸ ರೂಪು ನೀಡಿದರು. ಒಂದು ಯಂತ್ರದಿಂದ ಶುರುವಾದ ಉದ್ಯಮ ಈಗ ನೂರಾರು ಯಂತ್ರಗಳಿಗೆ ತಲುಪಿದೆ. ಉತ್ತಮ ಹೊಲಿಗೆಗಳಿಗೆ ಹೆಸರಾಗಿರುವ ಲತಾ ಅವರ ಲುಂಬಿನಿ ಮಿನಿ ಗಾರ್ಮೆಂಟ್ಸ್ ಈಗ ಹಲವಾರು ಕಂಪನಿಗಳ ಆರ್ಡರ್ಸ್ ಪಡೆದು ಶರ್ಟ್, ಪ್ಯಾಂಟ್, ಚೂಡಿದಾರ್, ಜಾಕೆಟ್ಸ್ ಸೇರಿ ಹಲವು ವಸ್ತುಗಳನ್ನು ತಯಾರು ಮಾಡ್ತಿದೆ.
ಇದನ್ನೂ ವೀಕ್ಷಿಸಿ: ನೇವಿ ಮರ್ಚೆಂಟ್ ಉದ್ಯೋಗಕ್ಕೆ ಗುಡ್‌ಬೈ..ನವೋದ್ಯಮಕ್ಕೆ ಜೈ: ಸಚಿನ್ ಪಾಟೀಲ್ ಈಗ ಉದ್ಯಮಿ !