ದೊಡ್ಡಪ್ಪನ ಕೊಲೆಗೆ ಸೇಡು- ಇಬ್ಬರು ಸ್ನೇಹಿತರ ಭೀಕರ ಡಬಲ್ ಮರ್ಡರ್; ಸೇಡಿನ ಸಂಕೇತವಾಗಿ ಹೆಣದ ಪಕ್ಕ ಬಿಯರ್ ಬಾಟಲ್!

ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ, ದೊಡ್ಡಪ್ಪನ ಹತ್ಯೆಗೆ ಪ್ರತೀಕಾರವಾಗಿ ಇಬ್ಬರು ಸಹೋದರರು ಕುಚುಕು ಗೆಳೆಯರಾಗಿದ್ದ ಹಂತಕರನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯ ನಂತರ, ಸೇಡಿನ ಸಂಕೇತವಾಗಿ ಮೃತದೇಹಗಳ ಪಕ್ಕ ಬಿಯರ್ ಬಾಟಲ್‌ಗಳನ್ನು ಇಟ್ಟು ಪರಾರಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ವಿಜಯಪುರ/ಕನ್ನೂರು (ಅ.17): ಸೇಡಿನ ಕಿಚ್ಚಿಗೆ ವಿಜಯಪುರ ಜಿಲ್ಲೆಯ ಶಾಂತವಾಗಿದ್ದ ಕನ್ನೂರು ಗ್ರಾಮದಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದೆ. ದೊಡ್ಡಪ್ಪನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇಬ್ಬರು ಸಹೋದರರು, ಹಂತಕರು ಎನ್ನಲಾದ ಕುಚುಕು ಗೆಳೆಯರನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಹತ್ಯೆಯ ನಂತರ, ಸೇಡಿನ ಸಂಕೇತವಾಗಿ ಮೃತದೇಹಗಳ ಪಕ್ಕದಲ್ಲೇ ಬಿಯರ್ ಬಾಟಲ್‌ಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಭೀಕರ ದ್ವಂದ್ವ ಕೊಲೆ ಪ್ರಕರಣ ವಿಜಯಪುರ ಜಿಲ್ಲೆಯಾದ್ಯಂತ ಭೀತಿ ಹುಟ್ಟಿಸಿದೆ. ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ ಇಬ್ಬರು ಹಂತಕರ ಪೈಕಿ ಒಬ್ಬನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಿಯರ್ ಬಾಟಲ್‌ನಿಂದ ಶುರುವಾದ ಮುಗಿಯದ ಜಗಳ:

ಪೊಲೀಸ್ ತನಿಖೆಯಲ್ಲಿ ಡಬಲ್ ಮರ್ಡರ್ ಹಿಂದಿನ ರೋಚಕ ಕಥೆ ಹೊರಬಿದ್ದಿದೆ. ಕನ್ನೂರು ಗ್ರಾಮದ ಈರನಗೌಡ ಎಂಬುವವರ ಹತ್ಯೆಯೇ ಇಂದಿನ ಡಬಲ್ ಮರ್ಡರ್‌ಗೆ ಮುಖ್ಯ ಕಾರಣವಾಗಿದೆ. ಸಾಗರ್ ಮತ್ತು ಇಸಾಕ್ ಎಂಬ ಇಬ್ಬರು ಕುಚುಕು ಗೆಳೆಯರು ಈರನಗೌಡರ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾಗಿದ್ದರು. ಈರನಗೌಡರನ್ನು ಅವರು ಬಿಯರ್ ಬಾಟಲ್‌ನಿಂದ ಹೊಡೆದು** ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಇತ್ತೀಚೆಗೆ ಬಿಡುಗಡೆಯಾಗಿದ್ದರು.

ಜೈಲಿನಿಂದ ಹೊರಬಂದ ನಂತರವೂ ಸಾಗರ್ ಮತ್ತು ಇಸಾಕ್ ಇಬ್ಬರೂ ತಮ್ಮ ಪಾಡಿಗೆ ಇರಲಿಲ್ಲ. ಈರನಗೌಡರ ಕುಟುಂಬದವರನ್ನು ಕೆಣಕಲು ಶುರುಮಾಡಿದರು. 'ತಾಕತ್ ಇದ್ದರೆ ನಮ್ಮನ್ನು ಮುಟ್ಟಿ' ಎಂದು ಓಪನ್ ಚಾಲೆಂಜ್ ಹಾಕುವ ಮೂಲಕ ಗ್ರಾಮದಲ್ಲಿ 'ಹವಾ' ಕ್ರಿಯೇಟ್ ಮಾಡಲು ಪ್ರಯತ್ನಿಸಿದರು. ಸಾಗರ್ ಮತ್ತು ಇಸಾಕ್‌ನ ಈ ವರ್ತನೆಯಿಂದ ತೀವ್ರವಾಗಿ ಕೆರಳಿದ ಈರನಗೌಡರ ತಮ್ಮನ ಮಕ್ಕಳು, ತಮ್ಮ ದೊಡ್ಡಪ್ಪನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಪಣತೊಟ್ಟರು.

ಪಕ್ಕಾ ಸ್ಕೆಚ್, ತಲೆ ಜಜ್ಜಿ ಭೀಕರ ಹತ್ಯೆ

ಈರನಗೌಡರ ಕುಟುಂಬದ ಸಹೋದರರು ಸೇರಿ ಸಾಗರ್ ಮತ್ತು ಇಸಾಕ್‌ರನ್ನು ಮುಗಿಸಲು ಪಕ್ಕಾ ಸ್ಕೆಚ್ ಹಾಕಿದರು. ಎಂದಿನಂತೆ ಒಂದೇ ಬೈಕ್‌ನಲ್ಲಿ ಅಡ್ಡಾಡುತ್ತಿದ್ದ ಕುಚುಕು ಗೆಳೆಯರನ್ನು ಹಿಂಬಾಲಿಸಿ ಅಟ್ಯಾಕ್ ಮಾಡಲಾಗಿದೆ. ಹಂತಕರ ಪಡೆ, ತಮಗೆ ದೊರೆತ ಕಲ್ಲುಗಳನ್ನು ಎತ್ತಿಹಾಕಿ ಸಾಗರ್ ಮತ್ತು ಇಸಾಕ್‌ನ ತಲೆಗಳನ್ನು ಜಜ್ಜಿ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ನಂತರ ಹಂತಕರು ಒಂದು ವಿಚಿತ್ರ ಕೃತ್ಯ ಎಸಗಿದ್ದಾರೆ. ದೊಡ್ಡಪ್ಪನ ಕೊಲೆಗೆ ಸಾಗರ್ ಮತ್ತು ಇಸಾಕ್ ಯಾವ ಬಿಯರ್ ಬಾಟಲ್‌ಗಳನ್ನು ಬಳಸಿದ್ದರೋ, ಅದೇ ರೀತಿಯ ಬಾಟಲ್‌ಗಳನ್ನು ಮೃತದೇಹಗಳ ಪಕ್ಕದಲ್ಲಿ ಇಟ್ಟು, ಸೇಡು ತೀರಿಸಿಕೊಂಡಿರುವ ಸಂಕೇತವನ್ನು ನೀಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಸಣ್ಣ ಸೇಡಿನಿಂದ ಶುರುವಾದ ಘಟನೆ ಇಂದು ಎರಡು ಪ್ರತ್ಯೇಕ ಕೊಲೆಗಳಿಗೆ ಕಾರಣವಾಗಿ, ಬಾಳಿ ಬದುಕಬೇಕಿದ್ದ ಯುವಕರು ಜೈಲುಪಾಲಾಗಿದ್ದಾರೆ. ಈ ಸಂಬಂಧ ಪೊಲೀಸರು ಉಳಿದ ಹಂತಕರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Related Video